Index   ವಚನ - 3    Search  
 
ಕುಂಭದ ಮಳೆ ಹೊಯ್ಯಿತ್ತು. ಮೂರಂಗದ ನೇಗಿಲ ತರಿಯಬೇಕು. ಆರಂಗದ ಭೂಮಿಯಲ್ಲಿ ಅರಸಲಾಗಿ ಒಂದೆ ಮರ ಹುಟ್ಟಿತ್ತು. ಹುಟ್ಟುವಾಗ ಮರ ಮೂರು ಕವೆ, ಅಲ್ಲಿಂದತ್ತಾರು ಕವೆಯಾಯಿತ್ತು. ಆ ಆರರ ಮಧ್ಯದಲ್ಲಿ ಮೂವತ್ತಾರು ಕವೆಯಾಯಿತ್ತು. ಆ ಮೂವತ್ತಾರರ ಮಧ್ಯದಲ್ಲಿ ನೂರೊಂದು ಕೊಂಬೆ ಶಾಖೆಗೂಡಿತ್ತು. ಆ ಮರನನೇರಿ ಹಿಂದುಮುಂದಣ ಕೊಂಬೆ ಕಳೆದು ಕೊಡಲಿಯಾಡೋದಕ್ಕೆ ತೆರಪಮಾಡಿ, ನಡುವಣ ಕೊಂಬೆ ಕಡೆವುತ್ತಿರಲಾಗಿ, ಒಂದು ಹೊಯಿಲಿಗೆ ಇದರಂಗದ ತೊಪ್ಪೆ ಹರಿದು, ಉಭಯಕ್ಕೆ ದಿಂಡು ಹರಿದು, ತ್ರಿವಿಧಕ್ಕೆ ಗರ್ಭಗೆಚ್ಚು ಖಂಡಿತವಾಯಿತ್ತು. ಮರ ತಟ್ಟಾರಬೇಕೆಂದು ಇರಿಸಿ ಬಂದೆ, ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.