Index   ವಚನ - 4    Search  
 
ಎನ್ನ ಕಾಯದ ಕದಳಿಯೆ ಸಂಗನಬಸವಣ್ಣನು, ಎನ್ನ ಜೀವದ ಸುಮನವೆ ಚೆನ್ನಬಸವಣ್ಣನು. ಎನ್ನ ಭಾವದ ಬಲುಹೆ ಪ್ರಭುದೇವರು, ಎನ್ನ ತನುವಿನ ಮೂರ್ತಿಯೆ ಚಂದಯ್ಯನು, ಎನ್ನ ಮನದ ನಿಶ್ಚಯವೆ ಮಡಿವಾಳಯ್ಯನು, ಎನ್ನ ಪ್ರಾಣದ ಪರಿಣಾಮವೆ ಹಡಪದಪ್ಪಣ್ಣನು, ಎನ್ನ ಅರುಹಿನ ನೈಷ್ಠೆಯೆ ಸೊಡ್ಡಳ ಬಾಚರಸನು, ಎನ್ನಾಚಾರದ ದೃಢವೆ ಮೋಳಿಗೆಯ ಮಾರಯ್ಯನು, ಎನ್ನ ನೋಟದ ನಿಬ್ಬೆರಗೆ ಅನಿಮಿಷದೇವರು. ಎನ್ನ ಶ್ರೋತ್ರದ ಕೇಳಿಕೆಯೆ ಮರುಳಶಂಕರದೇವರು, ಎನ್ನ ಹೃದಯದ ಜ್ಯೋತಿಯೆ ಘಟ್ಟಿವಾಳಯ್ಯನು, ಎನ್ನಂತರಂಗದ ಬೆಳಗೆ ಅಜಗಣ್ಣಯ್ಯನು, ಎನ್ನ ಬಹಿರಂಗದ ನಿರಾಳವೆ ನಿಜಗುಣದೇವರು, ಎನ್ನ ಸರ್ವಾಂಗದ ಕಳೆಯೆ ಸಿದ್ಧರಾಮಯ್ಯನು, ಎನ್ನ ಗತಿಮತಿಚೈತನ್ಯವೆ ಏಳ್ನೂರೆಪ್ಪತ್ತಮರಗಣಂಗಳು, ಭೋಗಬಂಕೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.