Index   ವಚನ - 6    Search  
 
ಭರಿತಾರ್ಪಣವೆಂದು ಅಪೇಕ್ಷಿಸುವಲ್ಲಿ ಸೂಚನೆಯರಿತು ಒಂದನೊಂದು ಇರಿಸೆಂದು ಸಂದಣಿಗೊಳುತ್ತ, ಬಂದ ದ್ರವ್ಯವೆಯ್ದದೆಂದು ತಂದು ಸುರಿಯೆನುತ್ತ, ಸಂದ ದ್ರವ್ಯವ ಮತ್ತೆ ಉಲ್ಲಂಘಿಸಿ ಇರುತ್ತ, ಮತ್ತೆ ಮಿಶ್ರದಿಂದ ದ್ರವ್ಯಂಗಳು ಬಿಸುರಿಬಂದು ಸೋಂಕಲಿಕೆ ಮತ್ತಿರಿಸಬಹುದೆ? ಕಟ್ಟಳೆಯ ಮೀರಿ ಸೋಂಕಿದುದ ಮತ್ತೆ ಅರ್ಪಿಸಬಹುದೆ? ಇದು ಕಾರಣದಲ್ಲಿ ಕೆರಹಿನಳೆತಕ್ಕೆ ಕಾಲ ಕಡಿಸಿಕೊಳ್ಳದೆ, ಬಸುರಿಂಗಾಗಿ ಬಣಬೆಯ ಸುಡದೆ, ಕಿಂಚಿತ್ತು ವಿಷಯಲಂಪಟಕ್ಕಾಗಿ ಸಹಪಂಕ್ತಿಗಳಲ್ಲಿ ವಿಶೇಷವನೆಂದೂ ಮುಟ್ಟದೆ, ಅವರು ತಮ್ಮಾಳಿಯನರಿದು ಮಾಡಿದಂತೆ, ತಾ ತನ್ನ ವೇಳೆಯನರಿದು ಅರ್ಪಿತವ ಮಾಡಿಕೊಂಡು ಮಹಾನದಿಗಳಲ್ಲಿ ಸ್ಥೂಲ ಸೂಕ್ಷ್ಮ ಅತಿಸೂಕ್ಷ್ಮ ಕುಂಭಗಳನದ್ದಿ ತೆಗೆದಲ್ಲಿ ಕುಂಭಕ್ಕೆ ತಕ್ಕ ಅಂಬು, ಅಂಗಕ್ಕೆ ತಕ್ಕ ದ್ರವ್ಯಪದಾರ್ಥಂಗಳ ಅಂಗೀಕರಿಸುವುದು ಭರಿತಾರ್ಪಣದ ಸಂಗ. ಇದು ಲಿಂಗಸೋಂಕಿನ ಅಂಗದ ವಿವರ. ಹೀಂಗಲ್ಲದೆ ತಂದು ಸುರಿಯಿಸಿಕೊಂಡು, ಕೊಂಡಷ್ಟ ಕೊಂಡು, ಇಂತೀ ಭರಿತಾರ್ಪಣಲಿಂಗಪ್ರಸಾದವ ಕಂಡವರು ಕೊಂಡುಹೋಗಿ ಎಂದು ಕೊಡುವ ಭಂಡನ ಭರಿತಾರ್ಪಣ ಲಿಂಗಕ್ಕೆ ಸಲ್ಲದಾಗಿ,, ಇದು ಕಾರಣದಲ್ಲಿ ತುಂಬಿದ ಶಕಟಕ್ಕೆ ಅಂಗುಲದಷ್ಟು ತೃಣಭಾರವಾದಂತೆ, ಇದು ಶಿವಲಿಂಗಾಂಗಿಗಳು ಒಪ್ಪದ ತೆರ. ಇಂತೀ ಗುಣ ಭರಿತಾರ್ಪಣಂಗಳಲ್ಲಿ ನಿಂದುದ ಸಂದುದ ಬಂಧಂಗಳಲ್ಲಿ ಆತ್ಮವಿಚ್ಛಂದವಿಲ್ಲದೆ ಆ ಲಿಂಗಘಟಕ್ಕೆ ಸಲುವ ಪ್ರಮಾಣಂಗಳನರಿದು ಅರ್ಪಿತವ ಮಾಡುವುದು ಭರಿತಾರ್ಪಣ. ಈ ಗುಣ ಭೋಗಬಂಕೇಶ್ವರಲಿಂಗಕ್ಕೆ ಸಮರ್ಪಣ.