Index   ವಚನ - 11    Search  
 
ಸಕಲಪದಾರ್ಥದ್ರವ್ಯಂಗಳೆಲ್ಲವ ಲಿಂಗಕ್ಕೆ ಮುಟ್ಟಿಸಿ ಪ್ರಸಾದ ಮುಂತಾಗಿ ತಾ ಮುಟ್ಟಿಹೆನೆಂಬಲ್ಲಿ ತನ್ನ ಸಂಕಲ್ಪದ ಗುಣವೋ? ಘನಲಿಂಗಕ್ಕೆ ತೃಪ್ತಿಮಾಡಿ ಒಕ್ಕುದ ಕೊಂಡಿಹೆನೆಂಬ ಕಟ್ಟಳೆಯ ಗುಣವೊ? ಇಂತೀ ಸತ್ಕ್ರೀಮಾರ್ಗಂಗಳನರಿದು ಅರ್ಪಿಸುವಲ್ಲಿ ಲಿಂಗಮುಂತಾಗಿ ತಾ ಕೊಂಬನಾಗಿ ಲಿಂಗಕ್ಕೆ ಮರೆದು ತಾ ಕೊಂಡಿಹೆನೆಂಬಲ್ಲಿ ಲಿಂಗಕ್ಕೆ ತಾನೊಳಗೊ ಹೊರಗೊ - ಎಂಬುದು ತಿಳಿದು, ಸಂದುದ ಕೈಕೊಂಡು ಸಲ್ಲದೆ ಮರವೆಯಿಂದ ಬಂದುದ ಚರಲಿಂಗದ ಮುಖದಿಂದ ಸಂದುದ ಕೈಕೊಂಬುದು ಅಂಗಸೋಂಕು, ಆತ್ಮಸೋಂಕು ಅರಿವುಸೋಂಕು. ಈ ತ್ರಿವಿಧ ಸೋಂಕು ಪರಿಪೂರ್ಣವಾದುದು ಅರ್ಪಿತ, ಅವಧಾನಿಯ ಕಟ್ಟು. ಹೀಂಗಲ್ಲದೆ ಮಿಕ್ಕಾದುದೆಲ್ಲವೂ ವಾಚಾಲಕರ ಕಟ್ಟುಕದ ಮಾತು. ಆ ಮಾತಿನ ಮಾಲೆಯೆಲ್ಲವೂ ಭ್ರಷ್ಟ. ಭೋಗಬಂಕೇಶ್ವರಲಿಂಗದಲ್ಲಿ ನಿಹಿತಾಚಾರಿಗಳ ಕಟ್ಟು.