Index   ವಚನ - 14    Search  
 
ಶೈವನೇಮಸ್ತರ ಕೈಯಲುಪದೇಶವಾದೊಡೇನಯ್ಯಾ, ಅಲ್ಲಿ ಏನೂ ಊನಯವಿಲ್ಲ, ಪಾರಂಪರ್ಯದಲ್ಲಿ ನಡದುತ್ತಾಗಿ. ನದಿಯ ಮೂಲವನೂ ಗುರುವಿನ ಮೂಲವನೂ ಅರಸುವರೆ? ಗುರುಲಿಂಗಜಂಗಮ ಸಾಕ್ಷಿಯಾಗಿ ಷಡಕ್ಷರ ಪ್ರಣವಮಂತ್ರದಿಂ ಲಿಂಗದರ್ಶನವಾಯಿತ್ತಾಗಿ ಕಳೆಯಬಾರದು, ಬೆರಸಿ ತನ್ನೊಳಗೆ ತಾನಚ್ಚೊತ್ತಿ ಕರಿಗೊಂಡಿತ್ತಾಗಿ. ಅಂದು ಬಳ್ಳೇಶ್ವರದ ಮಲ್ಲಯ್ಯಗಳು ಬಳ್ಳವ ಲಿಂಗವ ಮಾಡಿದರೆಂದು ಕಳೆದರೆ ಎಮ್ಮ ಪ್ರಮಥರು? ಕಾಳಹಸ್ತಿಯಲ್ಲಿ ಕಣ್ಣಪ್ಪದೇವರು ಸುಜ್ಞಾನಭಕ್ತಿಯಿಂದ ಸ್ಥಾವರವನೆ ಗುರುರೂಪ ಮಾಡಿ ಪೂಜಿಸಿದರೆಂದು ಕಳೆದರೆ ಎಮ್ಮ ಪುರಾತನರು? ಅಂದು ಕಲ್ಯಾಣದಲ್ಲಿ ಹುಸಿಯನೆ ದಿಟಮಾಡಿ ಬದನೆಕಾಯ ಲಿಂಗವ ಮಾಡಿ ಸಲಿಸನೆ ನಮ್ಮ ಬಸವಣ್ಣನು? ಇವರೆಲ್ಲರೂ ನಿಮ್ಮ ಭಜಿಸಿ ನಿಮ್ಮತ್ತಲಾದರು, ನಾ ನಿನಗೇನ ಮಾಡಿದೆನಯ್ಯಾ ಉಳಿಯುಮೇಶ್ವರಾ?