Index   ವಚನ - 3    Search  
 
ಅಷ್ಟತನುಮೂರ್ತಿ ಶಿವನೆಂಬ ಕಷ್ಟಜೀವಿಗಳನೇನೆಂಬೆನಯ್ಯಾ? ಯುಗಜುಗಂಗಳು ಪ್ರಳಯವಹಲ್ಲಿ ಧರೆ ಜಲದಲ್ಲಿ ಅಡಗಿತ್ತು, ಜಲ ಅಗ್ನಿಯಲ್ಲಿ ಅಡಗಿತ್ತು, ಅಗ್ನಿ ವಾಯುವಿನಲ್ಲಿ ಅಡಗಿತ್ತು, ವಾಯು ಆಕಾಶದಲ್ಲಿ ಅಡಗಿತ್ತು, ಆಕಾಶ ಅತೀತನಲ್ಲಿ ಅಡಗಿತ್ತು, ಅತೀತ ಆದಿಯೊಳಗಡಗಿತ್ತು, ಆದಿ ಅನಾದಿಯೊಳಡಗಿತ್ತು, ಅನಾದಿ ನಿಜದೊಳಡಗಿತ್ತು. ಇಂತೀ ಅಷ್ಟತನು ಒಂದರೊಳಗೊಂದಳಿವಲ್ಲಿ, ಒಂದರೊಳಗೊಂದು ಹುಟ್ಟುವಲ್ಲಿ, ಎಂದಳಿದನೆಂದು, ಹುಟ್ಟಿದನೆಂದು ಬಲ್ಲವರುಂಟೆ? ಹುಟ್ಟಿದನಳಿದವನೆಂಬ ಶಬ್ದವ ನುಡಿಯಲಾಗದು. ಇದು ಕಾರಣ, ನಮ್ಮ ಮಹಾಘನ ಸೋಮೇಶ್ವರನು ಮಾಡಿದಡಾದವು, ಬೇಡಾ ಎಂದಡೆ ಮಾದವು.