Index   ವಚನ - 12    Search  
 
ಕಾಯನೂ ಬಿಲ್ಲನೂ ಕೂಡೆ ಹಿಡಿದು ಎಸೆಯಬಹುದೆ? ಕ್ರೀಯನೂ ನಿಃಕ್ರೀಯನೂ ಕೂಡಿ ವೇದಿಸಿ ನಡೆಯಬಹುದೆ? ಕಾಯಿ ಹಣ್ಣಾಹನ್ನಕ್ಕ ಶಾಖೆಯ ಸಂಗ ಬೇಕು. ಹಣ್ಣುನೆರೆಬಲಿದು ರಸ ತುಂಬಿದ ಮತ್ತೆ ತೊಟ್ಟಿಗೆ ಬಿಡುಗಡೆ. ಜ್ಞಾನ ರಸ ಕ್ರೀಮಲ ತನ್ನೊಳಗಿದ್ದು ತನ್ನ ಸ್ವಾದು ಬೇರಾದಂತೆ. ಕ್ರೀ ಸಂಬಂಧ ಜ್ಞಾನ ಸಂಬಂಧ ಉಭಯವ ವಿಚಾರಿಸಲಿಕ್ಕಾಗಿ ನಿರವಯದಿಂದೊದಗಿದ ಸಾವಯವನರಿತು ನಿಃಕ್ರೀಯಿಂದಕೀವೊಡಲುಗೊಂಡುದ ಕಂಡು ಆದಿ ವಸ್ತುವಿಗೆ ಅನಾದಿ ವಸ್ತು ಬೀಜವಾದುದನರಿದು ನೀರಿಗೆ ಸಾರಬಂದು ರಸವಾದ ತೆರನಂತೆ ತಿಲ ಮರಳಿ ಹೊರಳಿ ಬೆಳೆವಲ್ಲಿ ಆ ರಸ ಬೇರಿಲೊ ಕೊನರಿಲೊ ಕುಸುಮದಲೊ ಕಾಯಲೊ? ಈ ಸರ್ವಾಂಗದೊಳಡಗಿ ಇದ್ದ ಠಾವ ಬಲ್ಲಡೆ ಕ್ರೀಜ್ಞಾನ ಸಂಬಂಧಿ. ಅದು ವಾರಿಯ ಸಾರದಿಂದ ಸಾಕಾರ ಬಲಿದು ನಿರಾಕಾರದ ಈ ಗುಣದಲ್ಲಿ ಒಂದರಿಂದ ಒಂದನರಿದೆಹೆನೆಂದಡೆ ಸಂದೇಹ ಮೊದಲಾದ ಸಂಶಯವರ್ತಕ ವಸ್ತುವಿನಲ್ಲಿ ವರ್ತಿಸಿ ವಸ್ತು ಆ ವಸ್ತುವ ಗರ್ಭೀಕರಿಸಿ ನಿಶ್ಚಯವಾದ ನಿಜ ಕ್ರೀ ನಿಃಕ್ರೀ ನಿರ್ವಾಹ ಗೋಪತಿನಾಥ ವಿಶ್ವೇಶ್ವರಲಿಂಗವನರಿತಲ್ಲಿ.