Index   ವಚನ - 36    Search  
 
ಗುರುಸ್ವರೂಪನಾಗಿ ಬಂದು ಬ್ರಹ್ಮನ ಉತ್ಪತ್ಯವ ಕೆಡಿಸಿ ಮಾಂಸಪಿಂಡವ ಕಳೆದು ಮಂತ್ರಪಿಂಡದಿಂದ ಪ್ರತಿಷ್ಠೆಯ ಮಾಡಿ ನಾನಾ ಕ್ರೀ ವರ್ತನಕ್ಕೆ ಹೊಲಬನಿಟ್ಟುಕೊಟ್ಟು ನಿನ್ನ ಕರಕಮಲದಲ್ಲಿ ಜ್ಯೋತಿರ್ಮಯವಪ್ಪ ನಿನ್ನ ನಿಜಾತ್ಮದರಿವ ಆ ಕುರುಹಿನಲ್ಲಿ ಬೈಚಿಟ್ಟು ನಿಜಲಿಂಗವ ಮಾಡಿ ಎನ್ನ ಕೈಯಲ್ಲಿ ಕೊಟ್ಟೆ. ಆ ಲಿಂಗಸ್ವರೂಪು ನೀನಾಗಿ ಬಂದು ಹೃತ್ಕಮಲದಲ್ಲಿ ನಿಂದು ಕರಣ ನಾಲ್ಕು ಮದವೆಂಟು ಇಂದ್ರಿಯವೈದು ವಿಷಯವಾರು ಇಂತಿವರೊಳಗಾದ ಸರ್ವೇಂದ್ರಿಯವ ಕೆಡಿಸಿ ತ್ರಿಗುಣಾತ್ಮಕದ ತ್ರಿಶಕ್ತಿ ಭೇದವ ತ್ರಿಮಲದ ಘೋಷವ ಕೆಡಿಸಿ ನಿಶ್ಚಯಪದದಿಂದ ಹೃತ್ಕಮಲವಾಸಿಯಾದೆ; ಆ ಗುಣದಿಂದ ನಾ ಸಾಫಲ್ಯನಾದೆ. ಜಂಗಮಮೂರ್ತಿಯಾಗಿ ಬಂದು ಎನಗೆ ದೀಕ್ಷಾಗುರು ಶಿಕ್ಷಾಗುರು ಮೋಕ್ಷಾಗುರುವಾಗಿ ಶುದ್ಧ ಸಿದ್ಧ ಪ್ರಸಿದ್ಧಮಂ ತೋರಿ ಎನ್ನ ಭವಛೇದನಮಂ ಮಾಡಿದೆ. ಇಂತೀ ತ್ರಿವಿಧಮೂರ್ತಿ ಭಕ್ತಿ ವಿಷಯದಿಂದ ಬಸವಣ್ಣ ಚನ್ನಬಸವಣ್ಣಗೋಸ್ಕರವಾಗಿ ಕ್ರಿಯಾಸಂಬಂಧಿಯಾದೆ. ಶಂಭುವಿನಿಂದಿತ್ತ ಸ್ವಯಂಭುವಿನಿಂದಿತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.