ತುಂಬಿ ಕುಸುಮದ ಬಂಡುಂಡಂತೆ
ಕುಸುಮದಂಗ ಹರಿಯದೆ
ಸುಗಂಧ ಆತ್ಮನಲ್ಲಿ ತುಂಬಿ ತುಂಬಿದ್ದಂತೆ
ಕುಂಡಲಿ ಕೀಟಕನ ತಂದು ಮೃತ್ತಿಕೆಯ ಮಂದಿರದಲ್ಲಿ ಇರಿಸಿ
ಆ ಬೆಂಬಳಿಯಲ್ಲಿ ಝೇಂಕರಿಸಲಾಗಿ
ಅದು ತನ್ನ ಭೀತಿಯಿಂದ ಮತ್ತೆ ಬಂದಿತ್ತಲ್ಲಾ ಎಂದು
ತಾ ಸತ್ತೆಹೆನೆಂಬ ಸಂದೇಹದಿಂದ ಮೂರ್ಛೆ ಕರಿಗೊಂಡು
ಕೀಟಕನಂಗವಳಿದು ಕುಂಡಲಿಯಾದ ತೆರದಂತೆ
ಈ ಗುಣ ಅಂಗಲಿಂಗ ಮೂರ್ತಿಧ್ಯಾನ ನಿಂದಲ್ಲಿ
ಪ್ರಾಣಲಿಂಗಸಂಬಂಧ.
ಅದು ತದ್ಭಾವ ನಿಜವಾದಲ್ಲಿ ಲಿಂಗಪ್ರಾಣಯೋಗ.
ಉಭಯದ ಸಂದನಳಿದು ಸಂಬಂಧ ಸಂಬಂಧಾವಾದಲ್ಲಿ
ಆ ವಸ್ತು ವಸ್ತುಲೇಪ
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.