ತ್ರಿವಿಧ ಪ್ರಸಾದವ ಸ್ವೀಕರಿಸುವಲ್ಲಿ
ತನ್ನ ಸತ್ಪಾತ್ರವಲ್ಲದುದ ಲಿಂಗಕ್ಕೆ ಅರ್ಪಿಸಿಕೊಂಡಹೆನೆನಲಿಲ್ಲ.
ಗುರು ಪ್ರಸಾದ ಬಂದಿತ್ತೆಂದು ತನ್ನ ಕ್ರೀ ಮೀರಿ ಮುಟ್ಟಲಿಲ್ಲ.
ಜಂಗಮ ಪ್ರಸಾದವ ಉಭಯ ಪ್ರಸಾದದಲ್ಲಿ ಕೂಡಿ
ತನ್ನ ಕ್ರೀ ಹೊರೆಯಾಗಿ ಕೊಳ್ಳಲಿಲ್ಲ.
ಇಂತೀ ತ್ರಿವಿಧ ಪ್ರಸಾದದ ಭೇದ
ಭಕ್ತಿ ವರ್ತಕಂಗೆ ಶುದ್ಧವಾದಲ್ಲಿ ಲಿಂಗ ಪ್ರಸಾದ.
ಮಾಹೇಶ್ವರ ವರ್ತಕಂಗೆ ತನು-ಮನ ಶುದ್ಧವಾದಲ್ಲಿ ಗುರು ಪ್ರಸಾದ.
ಪ್ರಸಾದಿಸ್ಥಲ ವರ್ತಕಂಗೆ ತ್ರಿವಿಧಮಲತ್ರಯ ದೂರಸ್ಥನಾಗಿ
ಮನ-ವಚನ-ಕಾಯ ತ್ರಿಕರಣದಲ್ಲಿ ಶುದ್ಧಾತ್ಮನಾಗಿ
ಆಯಾ ಉಚಿತದಲ್ಲಿ ಜಂಗಮ ಪ್ರಸಾದ ಬರಲಿಕ್ಕಾಗಿ
ಸ್ವಯ ಸತ್ಕ್ರೀ ತಪ್ಪದೆ ತನ್ನ ದೃಷ್ಟಕ್ಕೆ
ಕೊಟ್ಟು ಕೊಂಬುದು ಮಹಾಪ್ರಸಾದಿಯ ಪ್ರಸನ್ನ.
ಈ ರಚನೆ ಮಹಾಪ್ರಮಥರ ಪ್ರಸಾದ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ
ಮಾತುಳಂಗ ಮಧುಕೇಶ್ವರನು.