ಸ್ಥೂಲತನುವ ಬಿಟ್ಟು ನಿನ್ನ ಕಂಡೆಹೆನೆಂದಡೆ
ನಿನ್ನ ಪ್ರಮಾಣು ಕ್ರೀವಿಡಿದು ಅಂಗದಲ್ಲಿ ನಿಂದ ಕಾರಣ
ಸೂಕ್ಷ್ಮತನುವನೊಲ್ಲದೆ ನಿನ್ನ ಕಂಡೆಹೆನೆಂದಡೆ
ನಿನ್ನ ಪ್ರಮಾಣು ಭಾವದ ಕೈಯಲ್ಲಿ ಅರ್ಪಿಸಿಕೊಂಬೆಯಾಗಿ.
ಕಾರಣತನುವ ಹರಿದು ನಿನ್ನ ಕಂಡೆಹೆನೆಂದಡೆ
ನಿನ್ನ ಪ್ರಮಾಣು ಚಿದಾದಿತ್ಯ ಚಿತ್ಪ್ರಕಾಶದ ಬೆಳಗಿನಲ್ಲಿ
ಕಟ್ಟುವಡೆದೆಯಾಗಿ.
ಇಂತೀ ಜಾಗ್ರದಲ್ಲಿ ಕ್ರೀವಂತನಾಗಿ,
ಸ್ವಪ್ನದಲ್ಲಿ ಆತ್ಮಸ್ವರೂಪನಾಗಿ,
ಸುಷುಪ್ತಿಯಲ್ಲಿ ಮೂರ್ಛೆಯಿಂದ ಅಮೂರ್ತಿಯಾಗಿ
ವಿರಳಕ್ಕೆ ಅವಿರಳನಾಗಿ ಪರಿಪೂರ್ಣವಸ್ತು ನೀನಲಾ!
ಶುಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.