Index   ವಚನ - 98    Search  
 
ಸ್ಥೂಲ ತನುವಿಂಗೆ ಶಿಲೆಯ ಮರೆಯಲ್ಲಿ ಎನ್ನ ಘಟದಲ್ಲಿ ಮೂರ್ತಿಗೊಂಡು ಬಾಹ್ಯಕ್ರೀ ಆರ್ಚನೆ ಪೂಜನೆಗಳಿಂದ ಶುದ್ಧತೆಯ ಮಾಡಿದೆ. ಸೂಕ್ಷ್ಮ ತನುವಿಂಗೆ ಭಾವದ ಕೊನೆಯಲ್ಲಿ ಅರಿವಾಗಿ ಬಂದು ಪ್ರಕೃತಿ ಸಂಚಾರ ಮರವೆಯಿಂದ ಬಹ ತೆರನ ತೀರ್ಚಿ ಸರ್ವೇಂದ್ರಿಯಲ್ಲಿ ನೀ ನಿಂದು ಆ ಸೂಕ್ಷ್ಮತನುವ ಶುದ್ಧವ ಮಾಡಿದೆ. ಕಾರಣತನುವಿಂಗೆ ಇಂದ್ರ ಮಹೇಂದ್ರ ಜಾಲದಂತೆ, ಮರೀಚಿಕಾ ಜಲವಳಿಯತೆ, ವಿದ್ಯುಲ್ಲತೆಯ ಸಂಚದ ಶಂಕೆಯ ಬೆಳಗಿನಂತೆ ಸಷುಪ್ತಿಯಲ್ಲಿ ಮರವೆಯಿಂದ ಮಗ್ನನಾಗಲೀಸದೆ ಆ ಚಿತ್ತುವಿಗೆ ನೀ ಚಿತ್ತವಾಗಿ ಮೂರ್ಛೆಗೊಳಿಸದೆ ನೀನೆ ಮೂರ್ತಿಗೊಂಡೆಯಲ್ಲಾ! ಇಂತೀ ತ್ರಿವಿಧ ಸ್ವರೂಪಕ್ಕೆ ತ್ರಿವಿಧಾಂಗ ಭರಿತನಾಗಿ ತ್ರಿವಿಧ ಸ್ವರೂಪ ನೀನಲಾ! ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.