Index   ವಚನ - 43    Search  
 
ಗುರುಲಿಂಗ ಜಂಗಮದ ಇರವನರಿವಲ್ಲಿ, ತನ್ನ ಶ್ರದ್ಧೆಯೊ ಅವರ ಇರವೊ ಎಂಬುದನರಿಯಬೇಕು. ಗುರುವಿನಲ್ಲಿ ಗುಣವನರಸಲಿಲ್ಲಾ ಎಂಬರು; ಲಿಂಗದಲ್ಲಿ ಲಕ್ಷಣವನರಸಲಿಲ್ಲಾ ಎಂಬರು; ಜಂಗಮದಲ್ಲಿ ಜಾತಿಸೂತಕವನರಸಲಿಲ್ಲಾ ಎಂಬರು. ಇದು ಎಲ್ಲರ ಬಳಕೆಯ ಮಾತು. ಗುರುವಿನಲ್ಲಿ ಗುಣವಿಲ್ಲದಿರ್ದಡೆ ಶಿಷ್ಯನ ಕೃತಾರ್ಥನ ಮಾಡುವ ಪರಿಯಿನ್ನೆಂತೊ? ಲಿಂಗದಲ್ಲಿ ಲಕ್ಷಣವಿಲ್ಲದಿರ್ದಡೆ ಪಂಚಸೂತ್ರ ಪ್ರವರ್ತನ ವರ್ತುಳ ಗೋಮುಖ ಗೋಳಕಾಕಾರ ಇಷ್ಟಾರ್ಥ ಭಕ್ತರಿಗೆ ಮನೋಹರವಹ ಪರಿಯಿನ್ನೆಂತೊ? ಜಂಗಮಕ್ಕೆ ಜಾತಿಯಿಲ್ಲದಿರ್ದಡೆ, ಉತ್ತಮ ಕನಿಷ್ಠ ಮಧ್ಯಮ ಮುಖದಲ್ಲಿ ವೇದಾಂತಿ, ಭುಜದಲ್ಲಿ ಕ್ಷತ್ರಿಯ, ಉದರದಲ್ಲಿ ಹರದಿಗ, ಜಂಘೆಯಲ್ಲಿ ಹಲಾಯುಧ ಈ ಅಂಗದಲ್ಲಿ ವಿಶೇಷವ ಕಂಡು ಜಾತಿಯ ಹಿಂಗುವ ಪರಿಯಿನ್ನೆಂತೊ? ನುಡಿಯಬಾರದು, ದರಿಸಿನಕ್ಕಂಜಿ ಸುಮ್ಮನಿರಬಾರದು. ಜ್ಞಾನಕ್ಕಂಜಿ ಬಿದಿರ ಹೋಟೆಯಲ್ಲಿ ಹರಿದ ಉರಿಯಂತೆ ಬೇವುತ್ತಿದ್ದೇನೆ. ಈ ಬೇಗೆಯ ಬಿಡಿಸು ಆತುರವೈರಿ ಮಾರೇಶ್ವರಾ.