Index   ವಚನ - 11    Search  
 
ಹರಿವ ಹರಕುಳಿಯಲ್ಲಿ ಕೈಯನಿಕ್ಕಿ ನೋಡಿ ಅಡಗಿದ್ದ ಆವೆಯ ಹಿಡಿದೆ. ಒಂದು ಬಿಗಿದ ಬಿಲವ ಕಂಡು ಏಗೆಯ್ದು ಕೈಯನಿಕ್ಕಿ ನೋಡಿ ಸಾಗಿಸಿ ಹಿಡಿದೆ, ಉಭಯರಳಗೈಯಣ್ಣನ. ಇಂತೀ ಸರುಹಿನ ತಪ್ಪಲಲ್ಲಿ ನೆಪ್ಪ ನೋಡುತ್ತ ಹೋಗುತ್ತಿರಲಾಗಿ ಮುಂದೆ ಒಂದು ಕಟ್ಟೆ ಕಟ್ಟಿದುದು ಕಂಡೆ. ಆ ಕಟ್ಟೆಯೊಳಗೆ ನೀರತಡಿಯಲ್ಲಿ ಕಪೋತ, ಮಧ್ಯದಲ್ಲಿ ಪೀತ, ಕಡೆಯಲ್ಲಿ ಶ್ವೇತವಾಗಿದ್ದಿತು. ಈ ತ್ರಿವಿಧದ ನೀರ ಹೊಳದು ನೋಡುತ್ತಿರಲಾಗಿ ಎನ್ನ ಕಣ್ಣಿನ ಹೊಳಹುಗೂಡಿ ಹೊಳೆಯಿತ್ತೊಂದು ಮತ್ಸ್ಯ. ಆ ಹೊಳಹಿನ ಬೆಂಬಳಿಯಲ್ಲಿ ತಿಳಿದು ಕಂಡೆಹೆನೆಂದಡೆ ಉದಕವನೊಡಗೂಡಿದ ವರ್ಣ, ವರ್ಣವನೊಡಗೂಡಿದ ಮತ್ಸ್ಯ ನೋಡಾ. ಅದು ಎನಗೆ ಅಸಾಧ್ಯ, ಸಿಕ್ಕಿದವೆರಡೇ ಸಾಕು. ಆವೆಯ ಹೊಟ್ಟೆಯ ಕಳದು, ಏಡಿಯ ಕಾಲ ಮುರಿದು, ಇಷ್ಟೇ ಸಾಕೆಂದು ಬರುತ್ತಿರಲಾಗಿ, ಒಂದು ಉಡುವ ಕಂಡೆ. ದಡಿಯಲ್ಲಿ ಹೊಯ್ದೆ, ಆ ದಡಿ ಉಡುವಿನೊಳಡಗಿತ್ತು. ಆ ಉಡು ತ್ರಿವಿಧದ ತಡಿಯಲ್ಲಿ ಒಡಗೂಡಿತ್ತು. ಇದಕ್ಕೆ ಕಡೆ ನಡು ಮೊದಲ ಹೇಳಾ, ಕದಕತನ ಬೇಡ ಕದಂಬಲಿಂಗಾ.