Index   ವಚನ - 5    Search  
 
ಕ್ರಿಯಾಶಕ್ತಿ ಬ್ರಹ್ಮಂಗೆ ಸರಸ್ವತಿಯಾಗಿ ಬಂದುದನರಿದು, ಇಚ್ಛಾಶಕ್ತಿ ವಿಷ್ಣುವಿಂಗೆ ಮಹಾಲಕ್ಷ್ಮಿಯಾಗಿ ನಿಂದುದನರಿದು, ಜ್ಞಾನಶಕ್ತಿ ರುದ್ರಂಗೆ ಉಮಾದೇವಿಯಾಗಿ ಸಲೆ ಸಂದುದನರಿದು, ಇಂತೀ ತ್ರಿವಿಧ ಶಕ್ತಿಗಳ ಮನೋಹರದಲ್ಲಿ ತ್ರಿವಿಧ ಮೂರ್ತಿಗಳು ಆಡುವದ ಕಂಡು ನಾನಾಸುಖ ಪರಿಪೂರ್ಣ ಕಳೆಯಿಂದ ಕ್ರಿಯಾಶಕ್ತಿ ಅದರ ಸುಖೇಚ್ಛೆಯಿಂದ ಇಚ್ಛಾಶಕ್ತಿ ಈ ಉಭಯಶಕ್ತಿ ಸನ್ಮತವಾಗಿ ನಿಂದ ಉಳುಮೆ ಜ್ಞಾನಶಕ್ತಿ. ಇಂತೀ ತ್ರಿವಿಧ ಶಕ್ತಿಯ ಒಡಹುಟ್ಟಿ ನಾ ಬಂದೆ. ಬ್ರಹ್ಮಂಗೆ ಕಿರಿದಂಗಿಯ ಕೊಟ್ಟು ಮೈದುನನ ಮಾಡಿಕೊಂಡೆ. ವಿಷ್ಣುವಿಂಗೆ ನಡುವಳಾಕೆಯ ಕೊಟ್ಟು ಬಿಡುಮುಡಿಯ ಮೈದುನನ ಮಾಡಿಕೊಂಡೆ. ರುದ್ರಂಗೆ ಹಿರಿಯಕ್ಕನ ಕೊಟ್ಟು ಎನ್ನೊಡಗೂಡುವ ಭಾವನ ಮಾಡಿಕೊಂಡೆ. ಕಿರಿದಂಗಿಯ ಗಂಡ ಸತ್ತ, ನಡುದಂಗಿಯ ಗಂಡ ಬಿಟ್ಟ, ಹಿರಿಯಕ್ಕನ ಕೊಂದ ಭಾವ. ಇಂತೀ ಮೂವರ ಕೊಳುಕೊಡೆ ದೃಷ್ಟ ಸಂಬಂಧ ನಷ್ಟವಾಯಿತ್ತು. ಕಲುಹೃದಯದ ಕಲಕೇತಮಲ್ಲ ಬಂದೆ. ಗೆಲ್ಲ ಸೋಲವೆಂಬ ತಗರ ಕೋಡ ಹಿಡಿದು ಮೇಖಲೇಶ್ವರಲಿಂಗವಲ್ಲದಿಲ್ಲಾಯೆಂದು ನಲಿದು ಕುಣಿದಾಡಬಂದೆ.