ಜೀವನೆಂಬ ಅಳೆತದ ಕೋಲಿನಲ್ಲಿ
ಭಾವಜ್ಞ ನಾನಾದೆನೆಂಬವರೆಲ್ಲರೂ
ಅಳೆತಕ್ಕೆ ಸಂದು ಹೊರಳಿ ಮರಳುತೈದಾರೆ.
ಸರ್ವಸಂಗ ಪರಿತ್ಯಾಗವ ಮಾಡಿದೆನೆಂಬ
ಅರುಹಿರಿಯರೆಲ್ಲರೂ
ತಥ್ಯಮಿಥ್ಯವೆಂಬ ಕೋಲಿನಲ್ಲಿ
ಅಳತೆಗೊಳಗಾಗುತೈದಾರೆ.
ಹಿಂದಕೊಂದು ಕುರುಹಿಲ್ಲ,
ಮುಂದಕೊಂದು ಲಕ್ಷ್ಯವಿಲ್ಲಾ
ಎಂದು ಹಿಂಗಿ ನುಡಿದು,
ನಾವು ನಿರಂಗಿಗಳೆಂದು ಅಂಗವ
ಹೊತ್ತು ತಿರುಗಾಡುವರೆಲ್ಲರು
ಬಂಧ ಮೋಕ್ಷ ಕರ್ಮಂಗಳಿಂದ
ಅಂಗಳ ಬಾಗಿಲ ವಾಸಂಗಳಲ್ಲಿ
ಬಾ ಹೋಗೆನಿಸಿಕೊಂಬ ನಿಂದೆಯ ಕೋಲಿನಲ್ಲಿ
ಅಳತಕ್ಕೊಳಗಾಹರೆಲ್ಲರು
ಸರ್ವಾಂಗಲಿಂಗಿಗಳಪ್ಪರೆ?
ಇದರಂದವ ತಿಳಿದು ಆರಾರ
ಇರವು ಅವರಿರವಿನಂತೆ.
ತಾವಾಗಿ ಅರಿದವರಲ್ಲಿ ಅರುಹಿಸಿಕೊಂಬನ್ನಕ್ಕ
ಅವರೊಡಗೂಡಿ ಅವರು ತನ್ನನರಿದ ಮತ್ತೆ
ಆ ಅರಿಕೆಯ ತೆರ ತಾನೆಂಬುದನೆ ಪ್ರಮಾಣಿಸಿ
ಪಕ್ವವಾಹನ್ನಕ್ಕ ತೊಟ್ಟಿನೊಳಗಿಪ್ಪ ಫಲದ ತೆರನಂತೆ
ಈ ದೃಷ್ಟ ತನ್ನಷ್ಟವಹನ್ನಕ್ಕ
ತನ್ನ ಕಣ್ಣಿನಿಂದ ಕನ್ನಡಿಯ ನೋಡಿ
ತನ್ನ ತಾನೆ ಅರಿವುದು ಕಣ್ಣೋ ಕನ್ನಡಿಯೋ?
ಕನ್ನಡಿಯೆಂದಡೆ ಅಂಧಕಂಗೆ ಪ್ರತಿರೂಪಿಲ್ಲ.
ಇದು ಕಾರಣದಲ್ಲಿ ಅವರರಿವ
ತಾನರಿದು ತನ್ನರಿವ ಅವರರಿದು
ಉಭಯದರಿವು ಒಡಗೂಡುವನ್ನಕ್ಕ ಹಿಂದಣ ಕುರುಹು
ಮುಂದಣ ಲಕ್ಷ್ಯವ ವಿಚಾರಿಸಿ ಮರೆಯಬೇಕು
ಧಾರೇಶ್ವರಲಿಂಗನ ಕೂಡಬಲ್ಲಡೆ.
Art
Manuscript
Music
Courtesy:
Transliteration
Jīvanemba aḷetada kōlinalli
bhāvajña nānādenembavarellarū
aḷetakke sandu horaḷi maraḷutaidāre.
Sarvasaṅga parityāgava māḍidenemba
aruhiriyarellarū
tathyamithyavemba kōlinalli
aḷategoḷagāgutaidāre.
Hindakondu kuruhilla,
mundakondu lakṣyavillā
endu hiṅgi nuḍidu,
nāvu niraṅgigaḷendu aṅgava
hottu tirugāḍuvarellaru
bandha mōkṣa karmaṅgaḷinda
aṅgaḷa bāgila vāsaṅgaḷalli
bā hōgenisikomba nindeya kōlinalli
Aḷatakkoḷagāharellaru
sarvāṅgaliṅgigaḷappare?
Idarandava tiḷidu ārāra
iravu avariravinante.
Tāvāgi aridavaralli aruhisikombannakka
avaroḍagūḍi avaru tannanarida matte
ā arikeya tera tānembudane pramāṇisi
pakvavāhannakka toṭṭinoḷagippa phalada teranante
ī dr̥ṣṭa tannaṣṭavahannakka
tanna kaṇṇininda kannaḍiya nōḍi
tanna tāne arivudu kaṇṇō kannaḍiyō?
Kannaḍiyendaḍe andhakaṅge pratirūpilla.
Idu kāraṇadalli avarariva
tānaridu tannariva avararidu
ubhayadarivu oḍagūḍuvannakka hindaṇa kuruhu
mundaṇa lakṣyava vicārisi mareyabēku
dhārēśvaraliṅgana kūḍaballaḍe.