Index   ವಚನ - 7    Search  
 
ತೊಗಟೆಯೊಳಗಣ ಬೀಜ ಬೀಜದೊಳಗಣ ಅಂಕುರ ಸಾರ ಸಸಿರೂಪುದೋರದೆ ವೇಧಿಸಿಕೊಂಡಿಪ್ಪಂತೆ. ಇಂತೀ ಕ್ರೀಯೊಳಗಣ ಭಾವ, ಭಾವದೊಳಗಣ ಜ್ಞಾನ, ಜ್ಞಾನದೊಳಗಣ ಅರಿವು, ಅರಿವಿನೊಳಗಣ ನಿಜದ ಮಹಾಬೆಳಗಿನ ಕಳೆಯನೊಳಕೊಂಡ ಘನಮಹಿಮಂಗೆ ಹಿಡಿದಹೆನೆಂಬ ಭಾವದ ಭ್ರಮೆಯಿಲ್ಲ; ಬಿಟ್ಟಿಹೆನೆಂಬ ಕಟ್ಟಿನ ಸೂತಕವಿಲ್ಲ. ಎಲ್ಲಿ ಬಿಟ್ಟಲ್ಲಿ ತೊಟ್ಟು ಬಿಟ್ಟ ಹಣ್ಣಿನಂತೆ ಎಲ್ಲಿ ಮುಟ್ಟಿದಲ್ಲಿರ್ಪುರದ ಪಂಜರದಲ್ಲಿ ಉರಿಯಗಿಳಿ ಮಾತಾಡಿದಂತೆ ಉತ್ತರ ಮಾತಿಂಗೆ ಪ್ರತ್ಯುತ್ತರ ನಷ್ಟವಾದಂತೆ. ಇಂತೀ ಬಟ್ಟಬಯಲ ಕಟ್ಟಕಡೆಯ ದೃಷ್ಟವಿಲ್ಲದ ನಿರ್ಲಕ್ಷ್ಯಂಗೆ ಲಕ್ಷ್ಯಗೆಟ್ಟ ನಿಶ್ಚಯವಂತಂಗೆ ವ್ಯೋಮವಿಲ್ಲದ ಭಾವ ಭಾವವಿಲ್ಲದ ಜ್ಞಾನ ಜ್ಞಾನವಿಲ್ಲದ ಶೂನ್ಯ ಶೂನ್ಯವಿಲ್ಲದ ಸುಳುಹು ಸುಳುಹಿಲ್ಲದ ಅಖಂಡಿತನಾದ ಸರ್ವಗುಣ ಭರಿತ ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗವೆಂಬಲ್ಲಿ ತಾನು ತಾನಾದ ಶರಣ.