ನಾನಾ ವರ್ಣದ ಗೋವುಗಳೆಲ್ಲವೂ ಕೂಡಿ
ಒಂದೇ ಹೊಲದಲ್ಲಿ ಮೇದು,
ಆರು ಕೆರೆಯ ನೀರ ಕುಡಿದು,
ಒಂದೇ ದಾರಿಯಲ್ಲಿ ಬಂದು,
ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದವು.
ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು,
ಹಾಲಿಗೆ ಏಕವರ್ಣ,
ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿ
ಚಟ್ಟಿ ಹತ್ತದೆ, ಹಸುಕು ನಾರದೆ,
ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿ
ಕಾಸಿ ಉಣಬಲ್ಲಡೆ ಆತನೆ ಭೋಗಿ.
ಆತ ನಿರತಿಶಯಾನುಭಾವ ಶುದ್ಧಾತ್ಮನು.
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.