ಕೋಡಗದ ತಲೆಯ ಚಂಡಿನ ಮೇಲೆ
ಮೂರುಕವಲಿನ ಸೂಜೆ.
ಮೂರರ ಮನೆಯಲ್ಲಿ ಐದು ಬೆಟ್ಟವಡಗಿದವು.
ಬೆಟ್ಟದ ತುತ್ತತುದಿಯಲ್ಲಿ ಮಟ್ಟಿಲ್ಲದ ಬಾವಿ.
ಬಾವಿಯೊಳಗೊಂದು ಹಾವು ಹುಟ್ಟಿತ್ತು.
ಆ ಹಾವಿನ ಮೈಯೆಲ್ಲವೊ ಬಾಯಿ.
ಬಾಲದಲ್ಲಿ ಹೆಡೆ ಹುಟ್ಟಿ,
ಬಾಯಲ್ಲಿ ಬಾಲ ಹುಟ್ಟಿ,
ಹರಿವುದಕ್ಕೆ ಹಾದಿಯಿಲ್ಲದೆ,
ಕೊಂಬುದಕ್ಕೆ ಆಹಾರವಿಲ್ಲದೆ ಹೊಂದಿತ್ತು.
ಆ ಹಾವು ಬಾವಿಯ
ಬಸುರಿನಲ್ಲಿ ಬಾವಿಯ ಬಸುರೊಡೆದು
ಹಾವಿನ ಇಲು ನುಂಗಿ ಬೆಟ್ಟ ಚಿಪ್ಪು ಬೇರಾಗಿ
ಸೂಜಿಯ ಮೊನೆ ಮುರಿದು
ಕೋಡಗದ ಚಂಡು ಮಂಡೆಯ
ಬಿಟ್ಟು ಹಂಗು ಹರಿಯಿತ್ತು.
ಆತ್ಮನೆಂಬ ಲಿಂಗ ನಾಮ ರೂಪಿಲ್ಲ
ನಾರಾಯಣಪ್ರಿಯ ರಾಮನಾಥನಲ್ಲಿ
ಶಬ್ದಮುಗ್ಧನಾದ ಶರಣಂಗೆ.