Index   ವಚನ - 65    Search  
 
ಪರವನರಿವುದು ಅಪರವೊ ಪರವೊ? ಜ್ಞಾತೃವನರಿವುದು ಜ್ಞಾನವೊ ಜ್ಞಾತೃವೊ? ಜ್ಞೇಯವನರಿವುದು ಭಾವವೊ ಜ್ಞೇಯವೊ? ಅರಿವನರಿವುದು ಅರಿವೊ ಅಜ್ಞಾನವೊ? ದಿವವನರಿವುದು ರಾತ್ರಿಯೊ ದಿವವೋ? ಇಂತಿವರುಭಯವನರಿತಲ್ಲಿ ಭ್ರಾಂತುಗೊಂಡವರಂತೆ ಭ್ರಮಿಸಲದೇತಕ್ಕೆ? ಕ್ರೀಯಲ್ಲಿ ವೇಧಿಸಿ ಜ್ಞಾನದಲ್ಲಿ ಭೇದಿಸಿ ಬಣ್ಣ ಬಂಗಾರದಂತೆ ಭಿನ್ನ ಭಾವವಿಲ್ಲದೆ ನೆನೆವ ಮನವೇ ಲಿಂಗವಾಗಿ, ಲಿಂಗಮೂರ್ತಿಯ ನೆನಹಿಂಗೆ ಭಿನ್ನವಿಲ್ಲದೆ ರತ್ನಕುಲ ಪಾಷಾಣದಲ್ಲಿ ತೋರುವ ದೀಪ್ತಿಯ ಕಳೆಯಂತೆ ಲಿಂಗಕ್ಕೂ ಚಿತ್ತಕ್ಕೂ ಕುರುಹು ಹಿಂಗದ ಬೆಳಕು. ಹೀಗಲ್ಲದೆ ಲಿಂಗಸಂಗವಿಲ್ಲ. ಬಯಲ ಮಾತಿನ ಬಳಕೆಯಲ್ಲಿ, ವೇಷದ ಬಲಿಕೆಯಲ್ಲಿ, ಬರು ಮಾತಿಂಗೆ ಬಯಲ ಸಂಗಿ ಒಲಿವನೆ? ಮಾತು ಮನಸ್ಸು ಕೂರ್ತು ಜಗದೀಶನನರಿ ರಘುನಾಥಪ್ರಿಯ ರಾಮನಾಥಾ.