ಕುಂಡಲಿಯೆಂಬ ಆಧಾರದಲ್ಲಿ
ಜಲ ತೇಜ ವಾಯುವೆಂಬ ತ್ರಿವಿಧ ಕೂಡಿ
ಕಮಂಡಲ ಹುಟ್ಟಿತ್ತು.
ಅದಕ್ಕೆ ಬಾಯಿ ಮೂರು ಹೆಡೆಯಾರು.
ಜೂಳಿಯೊಂದರಲ್ಲಿ ಉದಕವ ಕೊಳುತಿರಲಾಗಿ
ಆ ಹಸುವಿನ ತೃಷೆಯಡಗಿ ಬಯಕೆ ಸಲೆ ಬತ್ತಿದಲ್ಲಿ
ಮಹಾಗಣನಾಥನ ಐವತ್ತೆರಡು ಸರ ಹರಿದವು.
ಮೂವತ್ತಾರು ಮಣಿ ಕೆಟ್ಟವು;
ಇಪ್ಪತ್ತೈದು ಮಣಿ ಪುಂಜವಾಯಿತ್ತು.
ಆರು ನಾಯಕರತ್ನ ಎಲ್ಲಿ ಅಡಗಿತ್ತೆಂದರಿಯೆ.
ಮೂರು ರತ್ನವ ಕಂಡೆ:
ಒಂದು ಉಲಿವುದು, ಒಂದು ಉರಿವುದು,
ಒಂದು ಬೆಳಗು ನಂದಿಹುದು.
ಇಂತೀ ತ್ರಿವಿಧಂಗವ ಕಂಡು
ಈ ಅಂಗದ ಮಣಿಯ ಒಂದೊಂದ ಪೋಣಿಸಲಾರದೆ
ಈ ದಿನಮಣಿಯ ವಿರಳವ ತೋರಿಸಾ
ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗವೆ.