Index   ವಚನ - 41    Search  
 
ಒಂದೆರಡು ಮೂರುವಿನ ಕುಂದು ಹೆಚ್ಚೆನಲಿಲ್ಲ. ಸಂದೇಹವಳಿಯದೆ ಉಳಿದನು. ನೊಂದು ನೋಯದ ನೋವು ಅಂದವಿಲ್ಲದ ಭೇದಿಗೆ ಇನ್ನೆಂತೊ! ಅರಿಯದ ಮದ್ದನಾರನು ಬೇರೆ ಹೊರಗೇನೂ ಇಲ್ಲ ಇನ್ನೆಂತೊ! ಮೂರು ಮಾತಿಂಗೆ ಸರಿ. ಪ್ರತಿಯಿಲ್ಲದ ಪ್ರತಿಯ ಕಂಡೆನೆಂದು ಪದವಿಡುವವ ರೂಪನಲ್ಲ. ಶ್ರುತಿಯಿಲ್ಲದ ಘನಕ್ಕಿನ್ನೆಂತೊ! ಕಟ್ಟಾಳು ನಾಲ್ವರು ಬಿಟ್ಟಾಳು ಐವರು ದುಷ್ಟರೆಂದು ಆರುವಿನ ದೆಸೆಯ ಹೊದ್ದ, ಮುಟ್ಟನೇಳೆಂಟೊಂಬತ್ತರ ಸಂಗವನೊಲ್ಲ. ಕೆಟ್ಟನಾ ಶರಣ, ಸಾಯದೆ ಸತ್ತನು! ಮಡುವಿಲ್ಲದಗ್ಘವಣಿ ಕೊಡುವನಲ್ಲ ಶರಣ. ಗಿಡುವೆಲ್ಲ ಪರಿಮಳ ಜ್ಞಾನಪುಷ್ಪ ಬಿಡದು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಉಂಟೆಂದು ಬಡಿದರು ಕೈಕಾಲ ಭ್ರಾಂತಳಿಯದವರು.