ತನ್ನಿಂದ ಬಿಟ್ಟು ಗುರುವಿಲ್ಲ,
ತನ್ನಿಂದ ಬಿಟ್ಟು ಲಿಂಗವಿಲ್ಲ,
ತನ್ನಿಂದ ಬಿಟ್ಟು ಜಂಗಮವಿಲ್ಲ,
ತನ್ನಿಂದ ಬಿಟ್ಟು ಪ್ರಸಾದವಿಲ್ಲ,
ತನ್ನಿಂದ ಬಿಟ್ಟು ಪಾದೋಕವಿಲ್ಲ,
ತನ್ನಿಂದ ಬಿಟ್ಟು ಪರವಿಲ್ಲ,
ತನ್ನಿಂದ ಬಿಟ್ಟು ಇನ್ನೇನೂ ಇಲ್ಲ.
ಅನಾದಿಯೊಳಗಿಲ್ಲ, ಭೇದಾಭೇದದೊಳಗಿಲ್ಲ,
ಅದು ಇದು ಎಂಬುದಿಲ್ಲ,
ಇದಿರೆಂಬ ಬಯಕೆಯಿಲ್ಲ, ಆದ್ಯರ ಸಂಗವು ಇಲ್ಲ.
ಸುರಾಳ ನಿರಾಳವೆಂಬವು ತಾನೆ,
ತಾನೆ ಪರವಸ್ತುವೆಂಬುದಕ್ಕೆ ಮುನ್ನವೆಯಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.