Index   ವಚನ - 2    Search  
 
ಅಂಗದ ಮೇಲೆ ಶ್ರೀಗುರು ಲಿಂಗ ಸಂಬಂಧವ ಮಾಡಿ ಅಂಗಾಶ್ರಯವನಳಿದು ಲಿಂಗಾಶ್ರಯವ ಮಾಡಿದ ಬಳಿಕ ಅಂಗಭೋಗಂಗಳ ಬಿಟ್ಟು, ಲಿಂಗ ಕ್ರಿಯೆಗಳನುಳ್ಳವರಾಗಿ ಅಂಗಾರ್ಚನೆಯನತಿಗಳೆದು ಲಿಂಗಾರ್ಚನೆಯ ಮಾಡುತ್ತ, ಅಂಗ ಮುಂತಲ್ಲವೆಂದು ಲಿಂಗ ಮುಂತಾಗಿಯೆ ಎಲ್ಲ ಕ್ರೀಗಳನು ಗಮಿಸಿ ಸದ್‍ವ್ರತವನಾಚರಿಸುತ್ತ, ನಿಜವೀರಶೈವ ಸಂಪನ್ನರಪ್ಪ ಭಕ್ತಜಂಗಮಾರಾಧ್ಯ ಸ್ಥಳಂಗಳನುಳ್ಳವರಾಗಿರ್ದು ಮತ್ತೆ ಮರಳಿ, ಅಂಗವನೆ ಆಶ್ರಯಿಸಿ, ಅಂಗಭೋಗಂಗಳನು, ಅಂಗಾರ್ಪಿತ ಭುಂಜನೆಗಳನು ಭಕ್ತ ಜಂಗಮಾರಾಧ್ಯ ಸ್ಥಳಂಗಳನ್ನುಳ್ಳವರಾಗಿರ್ದು ಮತ್ತೆ, ಮರಳಿ, ಅಂಗವನೆ ಆಶ್ರಯಿಸಿ ಅಂಗಭೋಗಂಗಳನು,ಅಂಗಕ್ರೀಗಳನು,ಅಂಗದರ್ಚನೆಗಳನು, ಅಂಗ ಮುಂತಾದ ಗಮನಂಗಳನು, ಅಂಗಾರ್ಪಿತ ಭುಂಜನೆಗಳನು, ಭಕ್ತ ಜಂಗಮಾರಾಧ್ಯರುಗಳು ಲಿಂಗವಿರಹಿತರಾಗಿ ಮಾಡಿದಡೆ ಲಿಂಗವಿಲ್ಲ, ಲಿಂಗಾರ್ಚನೆಯಿಲ್ಲ, ಲಿಂಗಪ್ರಸಾದವಿಲ್ಲ. ಲಿಂಗ ಮುಂತಾದ ಮುಕ್ತಿಗಮನ, ಇಹಪರದಲ್ಲಿಯೂ ಇಲ್ಲ. ಇದನರಿದು, ಲಿಂಗಭೋಗವೇ ಭೋಗ, ಲಿಂಗಾರ್ಚನೆಯೇ ಪೂಜೆ, ಲಿಂಗಾರ್ಪಿತವಾದುದೇ ಪ್ರಸಾದ, ಲಿಂಗಮುಂತಾಗಿಯೇ ಎಲ್ಲ ಕ್ರೀಗಳನು ಮಾಡುವುದಯ್ಯಾ, ಸಿಮ್ಮಲಿಗೆಯ ಚೆನ್ನರಾಮಾ.