Index   ವಚನ - 24    Search  
 
ಎಲುವಿನ ಹಂಜರ ಕರುಳಿನ ಜಾಳಿಗೆ ಅಮೇಧ್ಯದ ಹುತ್ತ ಮೂತ್ರದ ಬಾವಿ ಶ್ಲೇಷ್ಮದ ಕೆಸರು ಕೀವಿನ ಸೋನೆ ನೆತ್ತರ ಮಡು ನಾಡಿಗಳ ಸುತ್ತುವಳ್ಳಿ ನರವಿನ ನೇಣ ಜಂತ್ರ ಮಾಂಸದ ಘಟ್ಟಿ ತೆಪ್ಪ ಕಿಸುಕುಳದ ಹೇಸಿಕೆ ಅತಿಹೇಯ ಮಲಿನ ಅಸ್ಥಿ ರೋಮ ತೊಗಲ ಪಾಕುಳ ಕ್ರಿಮಿಯ ಸಂಕುಳ ಬಲಿದಪರ ರೇತೋ ರಜಸ್ಸಿನಲ್ಲಿ ಜನಿತ ಉತ್ಪತ್ತಿ ಸ್ಥಿತಿ ಲಯದ ಬೀಜ ಆಧಿ ವ್ಯಾಧಿಯ ತವರುಮನೆ ವಿಷಯದ ಭವ ದುಃಖದಾಗರ ಮೋಹದ ಬಲೆ ತೋರಿ ಕೊಡುವ ತನು. ಇದ ನೀನೆಂದು ನಿನ್ನದೆಂದು ಮಾಡಬಾರದ ಪಾಪಂಗಳ ಮಾಡಿ, ಬಾರದ ಭವಂಗಳಲ್ಲಿ ಬಂದು, ದೇಹದಿಚ್ಛೆಗೆ ಸಂದು, ಹೂಸಿ ಮೆತ್ತಿ ಹೊದಿಸಿದ ದೇಹದಂತುವ ಕಂಡು ಮರುಗುವೆ ಮರುಳಮಾನವಾ! ಅಘೋರ ನರಕದಲ್ಲಿಕ್ಕುವಾಗ ಅಡ್ಡಬಪ್ಪವರಾರು ಹೇಳಾ? ಅಹಂಮಮತೆಯ ಮರೆದು, ದೇಹದಿಚ್ಛೆಯ ಬಿಟ್ಟು ಸೋಹಂ ಬ್ರಹ್ಮಾಸ್ಮಿ ಎಂದು ಕೇಡಿಲ್ಲದ ಸುಖವ ಮಾಡಿಕೊ ಮರುಳೇ. ಮೋಹ ಬೇಡ! ಕೆಡುವೆ! ನಿನ್ನಲ್ಲಿ ನೀನೇ ತಿಳಿದು ನೋಡಾ! ಸಿಮ್ಮಲ್ಲಿಗೆಯ ಚೆನ್ನರಾಮಾ.