Index   ವಚನ - 153    Search  
 
ಹೆಡತಲೆಯ ಮಾತ ಬಲ್ಲಡೆ ಪ್ರಸಾದಿ. ನಡುನೆತ್ತಿಯ ಮರ್ಮವನರಿದಡೆ ಪ್ರಸಾದಿ. ಕಂಗಳ ಮೊಲೆ ಕೂರ್ಮನ ಆಪ್ಯಾಯನವ ಬಲ್ಲಡೆ ಪ್ರಸಾದಿ. ಅಂಗೇಂದ್ರಿಯವನೊಂದು ಮುಖವ ಮಾಡಬಲ್ಲಡೆ ಪ್ರಸಾದಿ. ನಿರಂಜನ ಜಂಗಮನನಾರೋಗಿಸಬಲ್ಲಡೆ ಪ್ರಸಾದಿ. ನಿರಾಲಂಬ ಪ್ರಣವಮನುಚ್ಚರಿಸಬಲ್ಲಡೆ ಪ್ರಸಾದಿ. ಹ್ರೀಂ ಶಕ್ತ್ಯಾರೂಢನಾದ ಚರಪಾದಾಂಬುವ ಹ್ರೈಂಶಕ್ತಿ ಬದ್ಧನಾದ ಲಿಂಗಕ್ಕೆ ಶಾಂತಿಯ ಮಾಡಬಲ್ಲಡೆ ಪ್ರಸಾದಿ. ಆಧಾರ ಬ್ರಹ್ಮದೊಳಗೆ ಅಡಗಿದ ಅಕ್ಷರವ ನೋಡಿ ಓದಬಲ್ಲಡೆ ಪ್ರಸಾದಿ. ಭಾವವ ಕ್ರೀಯಲ್ಲಿ ತಂದು ಭಾವದಲ್ಲಿ ನೆಲೆಗೊಳಿಸಬಲ್ಲಡೆ ಪ್ರಸಾದಿ. ಒಳಹೊರಗೆಂಬ ಭಾವಗೆಟ್ಟು ಸುಳುಹಿನ ಪ್ರಸಾದದ ಕಳೆವೆಳಗ ನುಂಗಿದ ಲಿಂಗಕ್ಕೆ ಅರ್ಪಿಸಿ ಸುಖಿಸಬಲ್ಲಡೆ ಪ್ರಸಾದಿ. ಸ್ಥಾವರವ ಜಂಗಮದೊಳಡಗಿಸಿ ಜಂಗಮವ ಸ್ಥಾವರವ ಮಾಡಬಲ್ಲಡೆ ಪ್ರಸಾದಿ. ಇದು ಕಾರಣ ನಿಜಗುಣನೆಂಬ ಮಹಾಜಂಗಮ ನಿಜಾನಂದವೆಂಬ ಒಕ್ಕುಮಿಕ್ಕಘನಪ್ರಸಾದವ ಕೊಟ್ಟನಾಗಿ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವೆನ್ನ ಹಿಂಗದಾಲಿಂಗಿಸಿದನಾಗಿ ಪ್ರಸಾದಿಯಾದೆ.