ಆರು ದರುಶನ ಹದಿನೆಂಟು
ಜಾತಿವೊಳಗಾದ ಜೀವನಂಗಳಿಗೆ,
ಕುಡಿವ ನೀರು, ಬೇಯಿಸುವ ಬೆಂಕಿ,
ಅಡಗುವ ಧರೆ ಒಂದೆನಬಹುದೆ?
ಸುಕ್ಷೇತ್ರ ವಾಸಂಗಳಲ್ಲಿ ಮೌಕ್ತಿಕರತ್ನ ಮಲಯಜ ಹಿಮಜಲ
ಮುಂತಾದ ಅಚೇತನ ಚೇತನ ವಸ್ತು ಕುಂಭಿನಿಯಲ್ಲಿ
ವಿಶೇಷ ವಾಸಂಗಳಲ್ಲಿ ಹುಟ್ಟಿದುದ ಕಂಡುಕೊಂಡು,
ಮತ್ತೆ ಮನೆಮಾರಿ ಒಡೆಯಂಗೆ ಸರಿಯಿಲ್ಲಾ ಎಂದು
ಅಕ್ಕನ ಕೊಂಡು ಬಂದು ಢಕ್ಕೆಯ ಬಾರಿಸುತ್ತಿದ್ದೇನೆ,
ಕಾಲಾಂತಕ ಭೀಮೇಶ್ವರಲಿಂಗವಲ್ಲದೆ ಇಲ್ಲಾ ಇಲ್ಲಾ ಎಂದು.