Index   ವಚನ - 68    Search  
 
ಮಲ ಅಮಲವೆಂಬ ಉಭಯವ ವಿಚಾರಿಸುವಲ್ಲಿ, ಕ್ರೀ ನಿಃಕ್ರೀಯೆಂದು ಭಾರಿಸುವಲ್ಲಿ, ಅಳಿವುದೇನು ಉಳಿದೇನು ಎಂಬುದ ತಾನರಿದಲ್ಲಿ, ಅಂಗದ ಮೇಲೊಂದು ಲಿಂಗವುಂಟೆಂದು ಮನದ ಮೇಲೊಂದು ಲಿಂಗವುಂಟೆಂದು ಭಿನ್ನಭಾವದಿಂದ ಕಾಬಲ್ಲಿ ಅಂಗಕ್ಕೂ ಮನಕ್ಕೂ ಲಿಂಗವೊಂದಲ್ಲದೆ, ಆತ್ಮ ಹಲವಿಲ್ಲ ಲಿಂಗ ಕೆಲವಿಲ್ಲ. ಗಿಂಡಿಯ ಉದಕ ಉಭಯ ಸಂಧಿಯಲ್ಲಿ ಬಾಹಂತೆ, ತುಂಬುವ ಘಟವೊಂದು ಸೂಸುವ ಜೂಳಿ ಬೇರಾದಂತೆ, ಅಂಗ ಪ್ರಾಣಲಿಂಗ ಸಂಬಂಧಯೋಗ ಸಂಭವವಾದಲ್ಲಿ ಕಾಲಾಂತಕ ಭೀಮೇಶ್ವರಲಿಂಗವು ತಾನೆ.