Index   ವಚನ - 7    Search  
 
ಭಕ್ತನೆಂಬ ಭೂಮಿಯಲ್ಲಿ ಗುರೂಪದೇಶವೆಂಬ ನೇಗಲಿಯಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಸೆಳೆಗೋಲಂ ಪಿಡಿದು, ಉತ್ತರ ಕ್ರಿಯೆಯೆಂಬ ಹಂಸನೇರಿ, ದುಷ್ಕರ್ಮದ ಕಾಟದ ಕುಲವಂ ಕಡಿದು, ಅರಿವೆಂಬ ರವಿಕಿರಣದಲ್ಲಿ ಒಣಗಿಸಿ, ಜ್ಞಾನವೆಂಬ ಬೆಂಕಿಯಲ್ಲಿ ಸುಟ್ಟುರುಹಿ, ಆ ಹೊಲನ ಹಸನವ ಮಾಡಿ, ಅದಕ್ಕೆ ಬಿತ್ತುವ ಭೇದವೆಂತೆಂದಡೆ: ಈಡಾ ಪಿಂಗಳ ಸುಷುಮ್ನವೆಂಬ ನಾಳವಂ ಜೋಡಿಸಿ, ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲಿಯೆಂಬ ಹಗ್ಗವಂ ಬಿಗಿದು, ಹಂಸನೆಂಬ ಎರಡೆತ್ತನ್ನೇ ಹೂಡಿ, ಶಾಂತಿ ನಿರ್ಮಲವೆಂಬ ಮಳೆಗಾಲದ ಮೇಘಮಂ ಸುರಿದು, ಆ ಬೀಜ ಪಸರಿಸಿ, ಪ್ರಜ್ವಲಿಸಿ ಫಲಕ್ಕೆ ಬಂದು ನಿಂತಿರಲು, ಅದಕ್ಕೆ ಒತ್ತುವ ಕಸ ಆವಾವೆಂದಡೆ: ಅಷ್ಟಮದದ ಹಲವಂ ಕಿತ್ತು, ಸಪ್ತವ್ಯಸನದ ಸೆದೆಯಂ ಕಳೆದು, ಮನೋರಥವೆಂಬ ಮಂಚಿಗೆಯನ್ನೇರಿ, ಬಾಲಚಂದ್ರನೆಂಬ ಕವಣಿಯಂ ಪಿಡಿದು, ಪ್ರಪಂಚವೆಂಬ ಹಕ್ಕಿಯಂ ಹೊಡೆದು, ಆ ಭತ್ತ ಬಲಿದು ನಿಂದಿರಲು, ಅದನ್ನು ಕೊಯ್ಯುವ ಭೇದವೆಂತೆಂದಡೆ: ಇಷ್ಟವೆಂಬ ಕುಡುಗೋಲಿಗೆ, ಪ್ರಾಣವೆಂಬ ಹಿಡಿಯ ಜೋಡಿಸಿ, ಭವಭವವೆಂಬ ಹಸ್ತದಿಂದ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವಡಂ ಕಟ್ಟಿ, ಸುಜ್ಞಾನಪಥವೆಂಬ ಬಂಡಿಯ ಹೇರಿ, ಮುಕ್ತಿ ಕೋಟಾರಕ್ಕೆ ತಂದು, ಉನ್ನತವೆಂಬ ತೆನೆಯಂ ತರಿದು, ಷಡುವರ್ಣವೆಂಬ ಬೇಗಾರರಂ ಕಳೆದು, ಅಂಗಜನೆಂಬ ಕಾಮನಂ ಕಣ್ಕಟ್ಟಿ, ಮಂಗಲನೆಂಬ ಕಣದಲ್ಲಿ ಯಮರಾಜನಿಗೆ ಕೋರ ಹಾಕದೆ, ಚಿತ್ರಗುಪ್ತರ ಸಂಪುಟಕ್ಕೆ ಬರಿಸದೆ, ಈ ಶಂಕರನೆಂಬ ಸವಿಧಾನ್ಯವನುಂಡು, ಸುಖಿಯಾಗಿರುತಿರ್ಪ ಒಕ್ಕಲಮಗನ ಎನಗೊಮ್ಮೆ ತೋರುತೋರಯ್ಯಾ, ಅಮರಗುಂಡದ ಮಲ್ಲಿಕಾರ್ಜುನ ಪ್ರಭುವೆ.