Index   ವಚನ - 8    Search  
 
ಶರಣ ಲಿಂಗಸಮರಸವಾಗಿ ಆಚರಿಸುವ. ಶರಣನ ಲಿಂಗ ಭಿನ್ನವಾಗಿ ಓಸರಿಸಿಹೋದರೆ ನೋಡಿ, ಅರಸಿ ಸಿಕ್ಕಿದ ಸಮಯದಲ್ಲಿ ಆ ಲಿಂಗವ ಪರೀಕ್ಷಿಸಿ ನೋಡುವುದು. ಆರು ಸ್ಥಾನಂಗಳಲ್ಲಿ ಭಿನ್ನವಿಲ್ಲದಿರ್ದಡೆ ಧರಿಸಿಕೊಂಬುದು. ಸರ್ವಮಾಹೇಶ್ವರರು ನೋಡಿ ಶಂಕೆಯುಳ್ಳಡೆ ಬಿಡುವುದು. ಅದೆಂತೆಂದಡೆ: ಶರಣನ ಸಂಕಲ್ಪ ಸನ್ಮತ ತನ್ನದೆಂಬುದೆ ದಿಟವೆಂದು ತಾ ನಿಶ್ಚೈಸಿ ತೆತ್ತಿಗರಾದ ಸರ್ವಮಾಹೇಶ್ವರರು ಮಂತ್ರಬೋಧನೆಯ ಕರ್ಣದಲ್ಲಿ ಬೋಧಿಸಬೇಕಲ್ಲದೆ ಆ ಲಿಂಗಧ್ಯಾನಾರೂಢನಪ್ಪಾತಂಗೆ ಧೂಪ ದೀಪ ಅಂಬರಗಳೆಂಬ ಬಂಧನವೈಕ್ಯವಂ ಮಾಡಲಾಗದು. ಮಾಡಿದಡೆ ಜ್ಞಾನಿಗಳೊಪ್ಪರು. ಅದು ಕಾರಣವಾಗಿ ಶಿವಧ್ಯಾನ ನಿಶ್ಚಿಂತವ ಮಾಡಿದ ಕಾರಣ ಅವರ ತೆತ್ತಿಗರಲ್ಲವೆಂಬೆ, ದಿಟ ಕಾಣಾ ನೀ ಸಾಕ್ಷಿ ನಿಮ್ಮಾಣೆ ನಿಮ್ಮ ಅರ್ಧಾಂಗಿಯಾಣೆ ಅಮರಗುಂಡದ ಮಲ್ಲಿಕಾರ್ಜುನಾ.