Index   ವಚನ - 42    Search  
 
ತ್ರಿವಿಧಲಿಂಗಕ್ಕೆ ಸೂತ್ರಭೇದ. ಸ್ಥಾವರಲಿಂಗ ಬಾಣಲಿಂಗ ಇಷ್ಟಲಿಂಗಕ್ಕೆ, ಪಂಚಸೂತ್ರದ ತ್ರಿವಿಧಲಿಂಗಕ್ಕೆ ಲಕ್ಷಣಭೇದ. ಚಕ್ರದಂಡಕ್ಕೆ ಖಂಡಿಕಾದಂಡಕ್ಕೆ ಶಕ್ತಿಪೀಠ ಗೋಮುಖಕ್ಕೆ ಪಂಚಾಂಗುಲದಲ್ಲಿ ಪ್ರಥಮಾಂಗುಲದ ರೇಖೆ ಮಧ್ಯದಲ್ಲಿ ಹೇಮ ಪ್ರಥಮ ಅಂಗುಲ ಗತಿ ನಾಲ್ಕರಲ್ಲಿ ಏಕಾದಶ ಪ್ರಕಾರ ಪ್ರಯೋಗದಲ್ಲಿ ಗುಣಿತದ ಸೂತ್ರ ಲೆಕ್ಕ ಪ್ರಯೋಗಿಸಿರೆ ಚಕ್ರದಂಡಭೇದ. ಆ ಅರೆಪ್ರಯೋಗ ಸೂತ್ರ ಖಂಡಿಕಾದಂಡ. ಆ ಉಭಯಭೇದ ಸೂತ್ರಸಂಬಂಧ ಗೋಮುಖ ಸೂತ್ರಾವಟ್ಟ ಪರಿವರ್ತನ ಪ್ರಯೋಗಸಂಬಂಧ. ವಿಸ್ತೀರ್ಣಕ್ಕೆ ದಿಗ್ವಳಯಕ್ಕೆ ಸರ[ಳ]ರೇಖೆ ಶುದ್ಧಪೀಠಿಕಾವಳಯಕ್ಕೆ ಮೇಲೆ ಲಿಂಗಪ್ರಯೋಗ ಚಕ್ರ. ಖಂಡಿಕಾಶಕ್ತಿಪೀಠಕ್ಕೆ ಲಿಂಗ ಪ್ರಮಾಣ ಲಕ್ಷಣಭೇದ. ಕುಬ್ಜ ದೀರ್ಘ ಹರಿವರಿಯಿಲ್ಲದೆ ಪ್ರಮಾಣ ಪಂಚಸೂತ್ರವಾಗಿ ರವಿ ಶಶಿ ಪವನ ಪಾವಕ ಪವಿತ್ರಯೋಗಿ ರೇಖೆ ಮುಂತಾದ ಲಕ್ಷಣಯುಕ್ತಿಯಲ್ಲಿ ಪ್ರತಿಷ್ಠೆ ಶೈವಲಿಂಗಭೇದ. ಆ ಪ್ರಮಾಣುವಿನಲ್ಲಿ ಸ್ಥೂಲಕ್ಕೆ ಸ್ಥೂಲ ಸೂಕ್ಷ್ಮಕ್ಕೆ ಸೂಕ್ಷ್ಮ. ಈ ಸೂತ್ರದಲ್ಲಿ ಬಾಣಲಿಂಗ ಇಷ್ಟಲಿಂಗದ ಲಕ್ಷಣಯುಕ್ತಿ. ಇಂತೀ ಭೇದ ಉತ್ತಮ ಕನಿಷ್ಠ ಮಧ್ಯಮವೆಂದು ಸಂಕಲ್ಪಕ್ಕೊಳಗಹ ವೇದಾಂತ ಪ್ರಥಮಪ್ರತಿಷ್ಠೆ ಆಚಾರ್ಯನ ಕರ್ಮಕ್ರೀ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ ಆಚಾರ್ಯನಂಗ.