ಮಹಾಶೂನ್ಯ ಅಂಧಕಾರ ಸುರಾಳ ನಿರಾಳ
ನಿರಾಲಂಬದಿಂದತ್ತ ತನ್ಮಯ ಸ್ವಯಂಭು ಸನ್ನದ್ಧವಾಗಿ
ಅನಾದಿವಸ್ತು ಆದಿಸ್ವರೂಪವ ತಾಳ್ದು ಬಂದ ವಿವರ:
ನಾದ ಬಿಂದು ಕಳೆ ಈ ತ್ರಿವಿಧಭೇದ ಏಕವಾಗಿನಿಂದ ದೆಸೆಯಿಂದ
ಆ ವಸ್ತುವಿನ ತಿಲಾಂಶು ಸದಾಶಿವಮೂರ್ತಿಯ ಅಂಶೀಭೂತವಾಗಿ
ಏಕಾಂತ ಪ್ರಮಥ ರುದ್ರನ ದೆಸೆಯಿಂದ
ದಶರುದ್ರರ ಸಂಬಂಧ ವೈಷ್ಣವಭೇದ.
ಆ ವೈಷ್ಣವ ದಶ ಅವತಾರಭೇದ.
ದಕ್ಷ ಮುಂತಾದ ನವಬ್ರಹ್ಮತ್ವದಿಂದ ಮನುಮುನಿಗಳು ಮುಂತಾದ
ಯಕ್ಷ ರಾಕ್ಷಸ ಶಕ್ತಿದೇವತೆ ಕುಲ ಮುಂತಾದ ಷಡ್ದರ್ಶನ
ಪಕ್ಷಪಾತ ಭೇದಂಗಳಾಗಿ ಇಪ್ಪ ತೆರನ
ವೇದದ ಹಾದಿಯಿಂದ ಶಾಸ್ತ್ರದ ಸಂದೇಹದಿಂದ
ಪುರಾಣದ ಪೂರ್ವ ಮುಂತಾದ ಯುಕ್ತಿಯಿಂದ ತಿಳಿದು
ಉತ್ತಮ ಮಧ್ಯಮ ಕನಿಷ್ಠವೆಂಬ ದೇವತ್ವಕುಲವನರಿ.
ಇಂದುವಿನ ಕಳೆಯಿಂದ ಆ ಇಂದುವಿನ ಕಳೆಯನರಿವಂತೆ
ಜ್ಯೋತಿಯ ಕಳೆಯಿಂದ ಆ ಜ್ಯೋತಿಯ ಲೇಸು ಕಷ್ಟವ ಕಾಂಬಂತೆ
ನಿಮ್ಮ ಶಾಸ್ತ್ರಸಂಪದಗಳಲ್ಲಿ ಏಕಮೇವನದ್ವಿತೀಯನೆಂಬ
ಶ್ರುತಿಯ ವಿಚಾರಿಸಿಕೊಂಡು ಇದ್ದ ಮತ್ತೆ ಆರಡಿಯೇತಕ್ಕೆ?
ಇಂತೀ ಭೇದಕ್ಕೆ ವಿಶ್ವಮಯನಾಗಿ ವಿಶ್ವಚಕ್ಷುವಾಗಿ
ತತ್ವಂಗಳಿಗೆ ಮುಖ್ಯವಾಗಿ ಉತ್ಪತ್ಯ ಸ್ಥಿತಿ ಲಯಕ್ಕೆ ಕರ್ತೃವಾಗಿ
ಆಚಾರ್ಯಮತಕ್ಕೆ ಅಂಗವಾಗಿ ಲೀಲಾಗುಣದಿಂದ ಶಕ್ತಿಸಮೇತವಾಗಿ ಮತ್ತೆ
ನಿನ್ನ ಇಚ್ಫೆ ಹಿಂಗಿ ನಿಶ್ಚಯವಾಗಿ ಸ್ವಯಂಭುವಾದೆಯಲ್ಲಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.