Index   ವಚನ - 84    Search  
 
ವೇದದ ಉತ್ತರವ ವಿಚಾರಿಸಿ, ಶಾಸ್ತ್ರದ ಸಂದೇಹವ ನಿಬದ್ಧಿಸಿ ಪುರಾಣದ ಅಭಿಸಂಧಿಯ ತಿಳಿದು ಇಂತಿವು ಮೊದಲಾದ ಆಗಮಂಗಳಲ್ಲಿ ಚಿಂತಿಸಿಯೆ ನೋಡಿ ಸಕಲಯುಕ್ತಿ ಶಬ್ದಸೂತ್ರಂಗಳಲ್ಲಿ ಪ್ರಮಾಣಿಸಿಯೆ ಕಂಡು ಮಾತುಗಂಟಿತನದಲ್ಲಿ ತರ್ಕಶಾಸ್ತ್ರಂಗಳಿಗೆ ಹೋಗದೆ ಪಂಚವಿಂಶತಿತತ್ವದೊಳಗಾದ ಆಧ್ಯಾತ್ಮ ಆದಿಭೌತಿಕವ ತಿಳಿದು ಪಂಚಭೂತಿಕದ ಸಂಚಿತ ಪ್ರಾರಬ್ಧ ಆಗಾಮಿಗಳ ಸಂಚಿನ ಸಂಕಲ್ಪವ ತಿಳಿದು ಪೃಥ್ವಿತತ್ವದ ಮಲ, ಅಪ್ಪುತತ್ವದ ಸಂಗ, ತೇಜತತ್ವದ ದಗ್ಧ, ವಾಯುತತ್ವದ ಸಂಚಲ, ಆಕಾಶತತ್ವದ ಬಹುವರ್ಣಕೃತಿ. ಇಂತೀ ಪಂಚಭೂತಿಕಂಗಳಲ್ಲಿ ತಿಳುವಳವಂ ಕಂಡು ಕರಂಡದಲ್ಲಿ ನಿಂದ ಗಂಧದಂತೆ ತನ್ನಂಗವಿಲ್ಲದೆ ಗಂಧ ತಲೆದೋರುವಂತೆ ವಸ್ತುಘಟಭೇದವಾದ ಸಂಬಂಧ. ಇಂತೀ ತೆರನ ತಿಳಿದು ವಾಗ್ವಾದಂಗಳಲ್ಲಿ ಹೋರಿಹೆನೆಂದಡೆ ಮಹಾನದಿಯ ವಾಳುಕದ ಮರೆಯ ನೀರಿನಂತೆ ಚೆಲ್ಲಿ ಕಂಡೆಹೆನೆಂದಡೆ ಆ ನದಿವುಳ್ಳನ್ನಕ್ಕ ಕಡೆಗಣಿಸಬಾರದು. ನಿಂದಲ್ಲಿ ಪ್ರಮಾಣುವಿಂದಲ್ಲದೆ ಮೀರಿ ತುಂಬದಾಗಿ ಇಂತೀ ಶ್ರುತ್ಯರ್ಥವಿಚಾರದಿಂದ ಹಾಕಿದ ಮುಂಡಿಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾಯೆಂದು.