Index   ವಚನ - 87    Search  
 
ವೇದ ಶಾಸ್ತ್ರ ಪುರಾಣ ಆಗಮಂಗಳಿಂದ ಸುಪಥದ ಹಾದಿಯನರಿತೆಹೆನೆಂದಡೆ ಸಂದೇಹದ ಸಂದು. ಇವ ಹಿಂಗಿ ಕಂಡೆಹೆನೆಂದಡೆ ನಡಹಿಲ್ಲದ ಬಟ್ಟೆ. ಒಂದ ಕಳೆದು ಒಂದರಲ್ಲಿ ನೋಡಿ ಅರಿತೆಹೆನೆಂದಡೆ ನೀರಿಲ್ಲದ ಏರಿ. ಏರಿಯಿಲ್ಲದ ನೀರು ನಿಲಲರಿಯದಾಗಿ ಇಂತೀ ವೇದದ ವಿಷಯ, ಶಾಸ್ತ್ರದ ಬಟ್ಟೆ ಪುರಾಣದ ಪುಣ್ಯ, ಆಗಮದ ಯುಕ್ತಿ. ಇಂತಿವ ತಿಳಿದು, ಖಂಡಿತರಿಗೆ ಉಭಯವಳಿದು ಸಂದೇಹಿಗಳಿಗೆ ಮಾಯಾವಾದ, ವೈದಿಕಕ್ಕೆ ತ್ರಿಗುಣಭೇದ. ಇಂತೀ ಏಕದಂಡ ದ್ವಿದಂಡ ತ್ರಿದಂಡ ಆಧ್ಯಾತ್ಮಭೇದ, ಶೈವಸಂಬಂಧ ಇಂತೀ ಆಚಾರ್ಯಮತ ಸಂಬಂಧಗಳಲ್ಲಿ ಭೇದವನಿಂಬುಗೊಟ್ಟು ವಿಭೇದಕ್ಕೆ ಒಳಗು ಹೊರಗಲ್ಲದೆ ನಿನ್ನನರಿವ ನಿಜಜ್ಞರುಗಳಲ್ಲಿ ನಿಂದ ನಿಜಸ್ವರೂಪ ನೀನೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.