ವೇದಶ್ರುತಿಯಿಂದ ವಸ್ತುವನರಿತೆಹೆನೆಂದಡೆ
ಆ ವೇದವೆ ಹಾದಿಯೆ ವಸ್ತುವ ಕಾಬುದಕ್ಕೆ?
ಆ ವೇದ ಸರ್ವವು ಬ್ರಹ್ಮವೆಂದಲ್ಲಿ ವಸ್ತು ಎಲ್ಲಿ ಉಳಿಯಿತ್ತು?
ಆ ತೆರನ ತಿಳಿದು ವೇದವಾರನರಸಿತ್ತು?
ಶ್ರುತಿ ಯಾರ ಭೇದಿಸಿತ್ತು?
ಆ ಗುಣ ನಾದಬಿಂದುಕಳೆಯೊಳಗಾದಲ್ಲಿ ವಸ್ತುತತ್ವರೂಪಾಯಿತ್ತು.
ಆ ಸ್ವರೂಪದ ಭೇದದಿಂದ ಪಂಚಭೌತಿಕದ ಗುಣದಿಂದ
ಪಂಚವಿಂಶತಿತತ್ವಂಗಳೆಲ್ಲವೂ ಗೊತ್ತಾದವು.
ನಾಲ್ಕು ವೇದ, ಹದಿನಾರು ಶಾಸ್ತ್ರ, ಇಪ್ಪತ್ತೆಂಟು ದಿವ್ಯಪುರಾಣಂಗಳಲ್ಲಿ
ವೇಧಿಸಿ ಭೇದಿಸಿ ಕಂಡೆನೆಂಬಲ್ಲಿ
ನಿಂದಿತ್ತು ನಿಜ ಸಂದೇಹಕ್ಕೆ ಒಳಗಾದುದಾಗಿ.
ತರ್ಕಂಗಳಿಂದ ತರ್ಕಿಸಿ ನೋಡಿ
ಮಿಕ್ಕಾದ ತತ್ವಂಗಳಲ್ಲಿ ಲಕ್ಷಿಸಿ ಪ್ರಮಾಣಿಸಿದಲ್ಲಿ
ವಸ್ತು ಹಲವು ಕುಲವೆಂದು ಕಲ್ಪಿಸಿ ನುಡಿವಲ್ಲಿ
ವಿಭೇದ ಪಕ್ಷವಲ್ಲದೆ ವಸ್ತು ಏಕರೂಪು.
ಜಲ ಬಹುನೆಲಂಗಳಲ್ಲಿ ನಿಂದು ಒಲವರವಿಲ್ಲದೆ
ಸಸಿ ವೃಕ್ಷಂಗಳ ಸಲಹುವಂತೆ ಸರ್ವಗುಣಸಂಪನ್ನನಾದೆಯಲ್ಲಾ
ಪರಮಪ್ರಕಾಶ ಪರಂಜ್ಯೋತಿ ಪಂಚಬ್ರಹ್ಮಸ್ವರೂಪನಾದೆಯಲ್ಲಾ
ಎನಗೆ ನೀನಾದೆಹೆನೆಂದು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.