Index   ವಚನ - 89    Search  
 
ವೇದೋತ್ತರ ಸಂಧಿ ಉಪಸನ್ನೆ ಸಂಜ್ಞೆ ಉತ್ತರ ಚಿಂತನೆ ಖಂಡನೆಗಳಲ್ಲಿ ಭೃಗು, ದಧೀಚಿ, ಕಾಶ್ಯಪ, ಸಾಂಖ್ಯ, ಅಗಸ್ತ್ಯ ಮೊದಲಾದ ಋಷಿವರ್ಗಂಗಳೆಲ್ಲರು ವೇದದ ಕಡೆ ಮೊದಲೆಂದು ಪಠಿಸಿ ವೇಧಿಸಿ ಆ ವೇದ ಚಿಂತನೆಗೆ ಸಂದುದಿಲ್ಲ. ಇಂತೀ ವೇದ ಮೊದಲು ಶಾಸ್ತ್ರ ಆಗಮ ಪುರಾಣಂಗಳಲ್ಲಿ ಸನ್ನಿಧಿ ಸಮನ ಗಮನ ಪರಿಪೂರ್ಣವಾದುದಿಲ್ಲ. ಒಂದು ವೇದ ನಾಮದ ಶಾಖೆವೊಂದಕ್ಕೆ ಉಪನಯನ ಭೇದ ಸಂಖ್ಯೆ ಶತಸಹಸ್ರ ಪುನರಪಿಯಾಗಿ ಬಪ್ಪಲ್ಲಿ ಒಂದು ಅಧ್ಯಾಯ ಸಂಬಂಧದಿಂದ. ಆ ಸಂಬಂಧ ಶಾಖೆ ಉಚಿತವಹಾಗ ವಿಷ್ಣುವಿಂಗೆ ಪರಮಾಯು, ಬ್ರಹ್ಮಂಗೆ ಉಪನಯನವಿಲ್ಲ ಋಷಿವರ್ಗಕ್ಕೆ ವೇದೋಪದೇಶವಿಲ್ಲ. ಇಂತೀ ಶಂಕೆಯ ಸಂಕಲ್ಪದಲ್ಲಿ ನೋಡಿ ಕಂಡೆಹೆನೆಂದಡೆ ಚಕ್ರದ ಅಂಗುಲದ ಬಳಸಿನ ಲೆಕ್ಕದಂತೆ ಇಂತೀ ವೇದದ ಹಾದಿಯಲ್ಲ, ಶಾಸ್ತ್ರದ ಸಂದೇಹವಲ್ಲ. ಆಗಮಂಗಳಲ್ಲಿ ಭೇದ ವಿಭೇದವ ಕಂಡು ತರ್ಕಂಗಳಲ್ಲಿ ಹೋರುವ ಕುತರ್ಕಿಯಲ್ಲ. ಇಂತಿವ ನೇತಿಗಳೆದ ಸರ್ವಾಂಗಲಿಂಗಸಂಬಂಧವಾದ ಶರಣನು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೇ ಅಂಗವಾದ ನಿರಂಗನು.