Index   ವಚನ - 96    Search  
 
ಸದಾಶಿವ ವಸ್ತುವ ಭೇದವಂಶದಲ್ಲಿ ಆದ ಮಹಾ ಅಂಧಕಾರದಲ್ಲಿ ಬಲಭದ್ರ ವೀರರುದ್ರನ ಸಂಬಂಧದಿಂದ ಆದ ಉಭಯ ಯುಗಳದಿಂದ ಆದ ಜಾತಿ ಉದ್ಭವ ಲಕ್ಷಣ. ಜಿಹ್ವೆಯಲ್ಲಿ ವೇದ, ಭುಜದಲ್ಲಿ ಶಸ್ತ್ರ, ಉದರದಲ್ಲಿ ವ್ಯವಹಾರ, ಜಂಘೆಯಲ್ಲಿ ಕೃಷಿ. ಇಂತೀ ಶೂದ್ರ ವೈಶ್ಯ ಕ್ಷತ್ರಿಯ ದ್ವಿಜ ಇಂತೀ ಮತಭೇದಂಗಳಲ್ಲಿ ಗೋತ್ರ ಹಲವಾಗಿ ವಾಸಿವಟ್ಟಕ್ಕೆ ಒಳಗಾದವು. ಇಂತಿವರ ಒಳಗು ಹೊರಗಲ್ಲ ಸಂತತ ಶರಣ ಶಿವಯೋಗಿ. ಕರಂಡದ ಗಂಧದಂತೆ, ಮೃತ್ತಿಕೆಯ ಹೇಮದಂತೆ ಶುಕ್ತಿಯ ಅಪ್ಪುವಿನಂತೆ, ಶಿಲೆಕುಲದ ರತಿಯಂತೆ ಮರ್ತ್ಯದ ಮತ್ತರ ಹೊದ್ದದ ಸ್ವಯಿಚ್ಫಾಪರ ಭಕ್ತ ಶಿವಯೋಗಿಗೆ ಮರ್ತ್ಯ ಕೈಲಾಸವೆಂಬ ಗೊತ್ತಿಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನು ತಾನೆ.