Index   ವಚನ - 95    Search  
 
ಸಕಲವೆಂದಲ್ಲಿ ನಿಃಕಲ, ನಿಃಕಲವೆಂದಲ್ಲಿ ಸಕಲ ದ್ವೈತ ಅದ್ವೈತವೆಂತೆಂದಂತೆಯೆಂಬುದು ಜಗದ ವಾಗ್ವಿಲಾಸ. ವಾಚಾರಚನೆಗಳಿಂದ ತ್ರಿಗುಣ ತ್ರಿವಿಧಮೂರ್ತಿಯ ಕಲ್ಪಿಸಿ ದಿವಾರಾತ್ರಿಯಂತೆ ಪುನರಪಿಯಾಗಿ ಅಳೆವುತ್ತಯಿಪ್ಪುದು ಉಮಾಪತಿಯ ಭೇದ. ಅದು ರುದ್ರನ ಲೀಲಾಭಾವ. ಆ ಗುಣವ ಛೇದಿಸಿ ನಿಂದಲ್ಲಿ ಹದಿನೆಂಟುದೋಷಂಗಳಿಗೆ ಹೊರಗಾಗಿ ತ್ರಿವಿಧ ಅವತಾರಮೂರ್ತಿಗಳಿಗೆ ಒಳಗಲ್ಲದೆ ಎಂಬತ್ತನಾಲ್ಕುಲಕ್ಷ ಜೀವಂಗಳಲ್ಲಿ ಆತ್ಮನ ಬಂಧಿಸದೆ ಇಂತೀ ದೋಷಂಗಳಲ್ಲಿ ಸಂದಿಸದೆ ನಿಜಾತ್ಮನ ನೆಲೆಯ ಉಚಿತವನರಿದು ತ್ರಿವಿಧ ಬಂಧದಲ್ಲಿಯೆ ಅಲ್ಲಿ ಅಲ್ಲಿ ಇಂಬಿಟ್ಟು ಸ್ವಯವೇ ತಾನಾಗಿರ್ದುದು ಸ್ವಯಂಭು. ಇಂತೀ ಉಭಯಸ್ಥಲಭಾವ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.