Index   ವಚನ - 15    Search  
 
ನಿಜಾ[ನಂದ] ನಿರ್ಭಿನ್ನವೆಂಬುವ ನಿತ್ಯನಾತನ ಪಿಂಡದೊಳಗೆ ನಿಶ್ಚಿಂತಾಮೃತವೆಂಬ ದಿವ್ಯಾಮೃತ ಕುಂಭವುಂಟು. ನಾಭಿಸ್ಥಾನದೊಳಗೆ ಇದ್ದಂಥಾ ಮಹಾಕುಂಭದೊಳಗೆ ಮಹಾನುಭಾವವೆಂಬುದೊಂದು ಸುವರ್ಣಮಂಟಪವುಂಟು. ಆ ಸುವರ್ಣ ಮಂಟಪದೊಳಗೆ ರತ್ನಸಿಂಹಾಸನವೆಂಬ ಮಹಾಪೀಠಿಕೆಯುಂಟು. ಆ ಪೀಠಿಕೆಯ [ಮೇಲೆ] ಸಾಸಿರ ಅನಂತಕೋಟಿಪ್ರಭೆಯೊಳಗಣ ಕಳಾಸ್ವರೂಪವಪ್ಪುದೊಂದು ಪ್ರಾಣಲಿಂಗ. ಆ ರತ್ನಪೀಠಿಕೆಯ ಮೇಲೆ ಪ್ರಕಾಶಿಸುತ್ತಿರ್ಪ ಲಿಂಗ. ಆ ಲಿಂಗವೆ ತನ್ನ ಸ್ವಯಾನಂದದಿಂದ ಊರ್ಧ್ವವೆಂಬ ಚಕ್ರಸ್ಥಾನದೊಳಗೆ ನಿಂದು ನೋಡುತ್ತಿರಲು ಒಂದು ಕಮಲ ವಿಕಸಿತವಾಯಿತ್ತು. ಆ ಕಮಲದೊಳಗೊಂದು ದಿವ್ಯಜ್ಞಾನವೆಂಬುದೊಂದು [ಲಿಂಗ]. ತಲ್ಲಿಂಗ ತೊಳಗಿ ಬೆಳಗಿ ಪ್ರಕಾಶಿಸಿತ್ತು. ನೋಡುತಿರಲು ತಾನೆ ಪರಂಜ್ಯೋತಿ ದಿವ್ಯವಸ್ತು ಎಂದೆ ಕಾ[ಣಾ], ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗದರಿಕೆಯಾಗಿ.