ಪೃಥ್ವಿ ಆಕಾಶದ ಮೇಲೆ ಗೌಪ್ಯವೆಂಬ ಪ್ರಣವದ ನಾದದ ಅಗ್ರದಲ್ಲಿ ಆದಿ
ಅನಾದಿಯ ಮುಟ್ಟದೆ, ಅಪರಿಮಿತವೆಂಬ ಕುಂಭವುಂಟು.
ಆ ಕುಂಭದ ಪೂರ್ವಬಾಗಿಲಿಗೆ ಎಂಟು ಎಸಳಿನ ಬೀಗ.
ಉತ್ತರ ಬಾಗಿಲಿಗೆ ಎಸಳು ಮೂರರ ಬೀಗ.
ಪಶ್ಚಿಮದ ಬಾಗಿಲಿಗೆ ಪಂಚ ಎಸಳಿನ ಬೀಗ.
ದಕ್ಷಿಣದ ಬಾಗಿಲಿಗೆ ಏಕ ಎಸಳಿನ ಬೀಗ.
ಆ ಬೀಗಂಗಳ ದಳದ ಎಸಳಿನಲ್ಲಿ ಕಳೆವಕ್ಷರಗಳೇಳು,
ಉಳಿವಕ್ಷರವಾರು, ಸಲುವಕ್ಷರ ಮೂರು, ನೆಲೆಯಕ್ಷರವೋಂದೇ.
ಇಂತೀ ಎರಡಕ್ಷರವ ಭಾವಿಸಿ ಪ್ರಮಾಣವಿಟ್ಟು ನೋಡಬಲ್ಲಡೆ
ಆ ಕುಂಭದೊಳಹೊರಗ ಕಾಣಬಹುದು.
ಇದು ಲಿಂಗಾಂಗಿಯ ನಿಜೈಕ್ಯಸ್ಥಲವೆಂಬೆ.
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು
ಯೋಗಕ್ಕೆ ಸಿಕ್ಕಲಿಲ್ಲವೆಂಬೆನು.