Index   ವಚನ - 6    Search  
 
ಆದಿ ಅನಾದಿಗಳಿಲ್ಲದಂದು ರೂಪು ನಿರೂಪುಗಳಿಲ್ಲದಂದು, ತನುಮಯ ಚಿನುಮಯವೆಂಬ ನಾಮವು ತಲೆದೋರದಂದು, ನೀನು ಇಲ್ಲದಿಪ್ಪಂದು, ಆನು ನಿನ್ನೊಳಗೆ ಹೆಸರಿಲ್ಲದೆ ಇಪ್ಪುದನರಿಯಾ. ಎನ್ನೊಳಗೆ ಉಭಯನಾಮವು ಪಸರಕ್ಕೆ ಬಾರದಂತೆ ಚೇತನವಾಗಿ ನೀನಿದ್ದುದನರಿಯಾ. ಏನು ಕಾರಣ ನೀನು ಶೂನ್ಯನಾದೆ, ನಿನ್ನ ಕಾರಣ ನಾನು ಸಾಕಾರನಾದೆ. ನಮ್ಮಿಬ್ಬರ ಬಯಕೆಯಿಂದ ಮಹಾದೇವನುದಯಿಸಿದ. ಆತನ ಮನೋಭಾವದಲ್ಲಿ ನೀನು ಹುಟ್ಟಿದೆ. ಆತನ ಅಭಯದಲ್ಲಿ ಆನು ಪುಟ್ಟಿದೆ. ಇಬ್ಬರಿಗೆ ಮದುವೆಯ ಮಾಡಿ ಕೈಗೂಡಿ,ಕಂಕಣದಾರವಂ ಕಟ್ಟಿದರಯ್ಯಾ. ಎನ್ನ ಸೋಂಕಿಂದ ನೀನು ಲಿಂಗವಾದೆ. ನಿನ್ನ ಸೋಂಕಿಂದ ಆನು ಅಂಗರೂಪಾದೆ. ಅದೆಂತೆಂದಡೆ: ಆನು ತೃಣ, ಎನ್ನೊಳಗಿಪ್ಪ ಅಗ್ನಿ ನೀನು. ಕರ್ಪುರ ಆನು, ಪರಿಮಳವಾಗಿ ವೇಧಿಸಿಕೊಂಡೆ ನೀ ಅಯ್ಯಾ. ಎನ್ನ ಕಂಗಳ ಕೊನೆಯ ಮೊನೆಯ ಮೇಲೆ ನೀನು ಮನೆಯ ಮಾಡಿಕೊಂಡಿಪ್ಪೆ, ನಿನ್ನ ಅಂತರಂಗದೊಳಗೆ ಆನು ಕಂದನಾಗಿ. ನಿಜಗುರು ಭೋಗೇಶ್ವರಾ, ನೀ ಮುನ್ನವೋ, ನಾ ಮುನ್ನವೋ ? ಬಲ್ಲಡೆ ಹೇಳಯ್ಯಾ.