Index   ವಚನ - 28    Search  
 
ಅಯ್ಯಾ, ನಾವು ಗುರು ಲಿಂಗ ಜಂಗಮದ ಪಾದೋದಕ ಪ್ರಸಾದಸಂಬಂಧಿಗಳೆಂದು ನುಡಿದುಕೊಂಬ ಪಾತಕರ ಮುಖವ ನೋಡಲಾಗದು. ಅದೇಕೆಂದಡೆ, ಪಾದೋದಕವ ಕೊಂಡ ಬಳಿಕ, ಜನನದ ಬೇರ ಕಿತ್ತೊರಸಬೇಕು. ಪ್ರಸಾದವ ಕೊಂಡ ಬಳಿಕ, ಪ್ರಳಯವ ಗೆಲಿಯಬೇಕು. ಇಂತಪ್ಪ ಚಿದ್ರಸ ಪಾದೋದಕ ಚಿತ್‍ಪ್ರಕಾಶ ಪ್ರಸಾದ. ತನ್ನ ಚಿನ್ಮನಸ್ವರೂಪವಾದ ಹೃದಯಮಂದಿರ ಮಧ್ಯದಲ್ಲಿ ನೆಲಸಿರುವ ಸಕೀಲಸಂಬಂಧವ ಚಿದ್ಘನ ಗುರುವಿನ ಮುಖದಿಂದ ಸಂಬಂಧಿಸಿಕೊಳಲರಿಯದೆ, ಅರ್ಥದಾಸೆಗಾಗಿ ಬಡ್ಡಿಯ ತೆಗೆದುಕೊಂಡು, ಬಡವರ ಬಂಧನಕಿಕ್ಕಿ, ತುಡುಗುವ್ಯಾಪಾರವ ಮಾಡಿ, ಸದಾಚಾರದಿಂದ ಆಚರಿಸಲರಿಯದೆ, ತನುಮನಧನದಲ್ಲಿ ವಂಚನೆಯಿಲ್ಲದ ಭಕ್ತಿಯನರಿಯದೆ, ತೀರ್ಥಪ್ರಸಾದದಲ್ಲಿ ನಂಬುಗೆ ವಿಶ್ವಾಸವಿಲ್ಲದೆ ಕಂಡವರ ಕೈಯೊಡ್ಡಿ ಇಕ್ಕಿಸಿಕೊಂಡು ವಿಶ್ವಾಸವಿಲ್ಲದವಂಗೆ ಅಷ್ಟಾವರಣವೆಂತು ಸಿದ್ಧಿಯಹುದೋ ? ಅದೇನು ಕಾರಣವೆಂದಡೆ : ಸಕಲ ವೇದಾಗಮ ಪುರಾಣ ಸಪ್ತಕೋಟಿ ಮಹಾಮಂತ್ರ ಉಪಮಂತ್ರ ಕೋಟ್ಯಾನುಕೋಟಿಗೆ ಮಾತೃಸ್ಥಾನವಾದ ಪಂಚಾಕ್ಷರಿಯ ಮಂತ್ರ ಸಟೆಯಾಯಿತ್ತು. ಅನಂತಕೋಟಿ ಬ್ರಹ್ಮಾಂಡಗಳನೊಳಗೊಂಡಂಥ ಗುರುಕೊಟ್ಟ ಇಷ್ಟಲಿಂಗ ಸಟೆಯಾಯಿತ್ತು. ದೇಗುಲದೊಳಗಣ ಕಲ್ಲು ಕಂಚು ಕಟ್ಟಿಗೆ ಬೆಳ್ಳಿ ತಾಮ್ರ ಬಂಗಾರದ ದೇವರ ಪೂಜಿಸುವ ಪೂಜಾರಿಗಳ ಮಾತು ದಿಟವಾಗಿತ್ತು. ಆದಿ ಅನಾದಿಯಿಂದತ್ತತ್ತಲಾಗಿ ಮೀರಿ ತೋರುವ ಮಾಯಾಕೋಳಾಹಳ ನಿರಂಜನಜಂಗಮದ ಪಾದೋದಕ ಪ್ರಸಾದ ಸಟೆಯಾಯಿತ್ತು. ಕ್ಷೇತ್ರಾದಿಗಳ ತೀರ್ಥಪ್ರಸಾದ ದಿಟವಾಯಿತ್ತು. ಅಂತಪ್ಪ ಅಗಮ್ಯ ಅಗೋಚರವಾದ ಅಷ್ಟಾವರಣ ಇಂಥವರಿಗೆಂತು ಸಾಧ್ಯವಹುದು? ಆಗದೆಂದಾತ ನಮ್ಮ ಶರಣ ಕಲಿದೇವರದೇವ