Index   ವಚನ - 31    Search  
 
ಅಯ್ಯಾ, ನಿಮ್ಮ ಪ್ರಸಾದದ ಮಹಿಮೆಯನೇನೆಂಬೆನೆಯ್ಯಾ. ವೇದಂಗಳರಿಯವು, ಶಾಸ್ತ್ರಂಗಳರಿಯವು. ಚಲವ ಸಾಧಿಸಿ, ತನುವ ದಂಡನೆಯ ಮಾಡಿ, ಸಕಲಭೋಗಂಗಳ ಬಿಟ್ಟು, ದುಃಖವನನುಭವಿಸಿ, ತಪ್ಪಿಲ್ಲದೆ ನಡೆದಡೆ ಹಡೆವರಯ್ಯಾ ಒಚ್ಚೊಚ್ಚಿ ಸ್ವರ್ಗದ ಭೋಗವನು. ಒಂದುವನು ಬಿಡಲಿಲ್ಲ, ಸಂದೇಹ ಮಾತ್ರವಿಲ್ಲ. ಆಗ ಬಿತ್ತಿ ಆಗ ಬೆಳೆಯುವಂತೆ, ರೋಗಿ ಬಯಸಿದ ವೈದ್ಯವ ಕುಡುವಂತೆ, ಪಾಪದಂತ್ಯವಾದುದು, ಪುಣ್ಯವನೆ ಮಾಡುವದು. ಆತ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಯೆನಿಸುವ. ಹಿಡಿತಡೆಯಿಲ್ಲ, ಪ್ರಸಾದದಿಂದತಃಪರವಿಲ್ಲ. ಪ್ರಸಾದಿಯಿಂದೆ ಮುಕ್ತರಿಲ್ಲ. ಇಂತಪ್ಪ ಪ್ರಸಾದವನು ನಿಮ್ಮ ಶರಣ ಬಸವಣ್ಣ ತೋರಿದನಾಗಿ, ಎನ್ನ ಭವಂ ನಾಸ್ತಿಯಾಯಿತ್ತು ಕಾಣಾ, ಕಲಿದೇವರದೇವ.