Index   ವಚನ - 33    Search  
 
ಅಯ್ಯಾ, ಭಕ್ತಜಂಗಮವೆಂದು ಒಪ್ಪಕ್ಕೆ ನುಡಿಯಬಹುದಲ್ಲದೆ ಭಕ್ತಜಂಗಮವಾಗಿ ನಿಂದ ನಿಲುಕಡೆಯ ಕೇಳಿರಣ್ಣ.ಅದೆಂತೆಂದಡೆ: ಸದ್ಗುರುಮುಖದಿಂದ ವೇಧಾಮಂತ್ರಕ್ರಿಯಾದೀಕ್ಷೆಯ ತಿಳಿದು, ಪಂಚಾಚಾರವೆ ಪ್ರಾಣವಾಗಿ, ಅಷ್ಟಾವರಣವೆ ಅಂಗವಾಗಿ, ಸದ್ಭಕ್ತಿಯೆ ಮುಕ್ತಿಮಂದಿರವಾಗಿ, ಸತ್ಕ್ರಿಯಾ ಸಮ್ಯಕ್‍ಜ್ಞಾನವೆ ಸಂಜೀವನವಾಗಿ, ಕೊಡುವಲ್ಲಿ ಕೊಂಬಲ್ಲಿ ನಡೆನುಡಿ ಬೀಸರವೋಗದೆ, ಬಹಿರಂಗದಲ್ಲಿ ಆಚರಣೆ, ಅಂತರಂಗದಲ್ಲಿ ಸಂಬಂಧವ ಸದ್ಗುರು ಲಿಂಗಜಂಗಮ ಕರುಣಕಟಾಕ್ಷೆಯಿಂ ತಿಳಿದು, ಸನ್ಮಾರ್ಗವಿಡಿದು ಸತ್ಯನಡೆನುಡಿಯಿಂದಾಚರಿಸುವ ಶರಣಗಣಂಗಳೆ ಅನಾದಿ ಭಕ್ತಜಂಗಮ ಕಾಣಾ, ಕಲಿದೇವರದೇವ ಸಾಕ್ಷಿಯಾಗಿ ಸಂಗನಬಸವೇಶ್ವರಾ.