Index   ವಚನ - 171    Search  
 
ಜೀವರು ಜೀವಿಸಿ ಜೀವನ್ಮುಕ್ತವೆಂತೆಂದರಿಯರು. ಜೀವಂಗೆ ಆತ್ಮಸ್ಥಲ ಸಲ್ಲದು. ತಮ್ಮ ಜೀವಾತ್ಮನನು ಶಿವನೆಂದು, ತಮ್ಮ ಶರೀರವನು ಶಿವನೆಂದು ಅನಂತ ಋಷಿಯ ಅರ್ಚಿಸಿಕೊಂಬರು. ಆರಾರುವೆಂದಡೆ: ವಶಿಷ್ಠ ವಾಲ್ಮೀಕಿ ಭೃಗು ದಧೀಚಿ ಕಾಶ್ಯಪ ಅಗಸ್ತ್ಯ ಮಾರ್ಕಂಡೇಯ ಮೊದಲಾದ ಮಹಾಋಷಿಯರು. ಅವರ ಶಾಪಾನುಗ್ರಹ ಸಾಮರ್ಥಿಕೆಯ ಪೇಳುವಡೆ, ಅನಂತ ಶ್ರುತಿಗಳೈದಾವೆ, ಅನಂತ ಶಾಸ್ತ್ರಂಗಳೈದಾವೆ. ಶಿವನ ಕರದೋಯೆನಿಸಬಲ್ಲರು. ಅಂತಹರು, ಅಕಟಕಟ ಭಕ್ತಿಯ ಕುಳವನರಿಯದೆ, ಭವಭಾರಕರಾದರು. ಅಂತು ಜೀವನ ಬಲುಹಿಂದಲು ಸುರರು ಖೇಚರರು ಗರುಡ ಗಂಧರ್ವರು ಸಿದ್ಧವಿದ್ಯಾಧರರು ಗುಹ್ಯಕರು ಯಕ್ಷರಾಕ್ಷಸರು ಹರಿವಿರಂಚಿಗಳು ಮೊದಲಾದ ದೈವಂಗಳೆಲ್ಲಾ ಪ್ರಳಯಚಕ್ರಕ್ಕೊಳಗಾದರು. ಭಾವಾದ್ವೈತರು ವಾಗಾದ್ವೈತರು ಶ್ವಾನಜ್ಞಾನಿಗಳಾಗಿ ಕೆಟ್ಟರು. ಭಕ್ತರು ಭಕ್ತಿಯ ಸ್ಥಿತಿ ಕುಳವನರಿಯದೆ, ಧ್ಯಾನ ಮೌನ ಅನುಷ್ಠಾನ ಜಪತಪ ಸಮಾಧಿ ಸಂಜೆ ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರ ಇಂತೀ ವ್ರತ ಭಾವ ಭಕ್ತಿಯ ಮಾಡಿದರಲ್ಲದೆ, ಭಕ್ತಿದಾಸೋಹವನರಿಯದೆ ಕೆಟ್ಟರು. ಅಂದು ನಮ್ಮ ಬಸವಣ್ಣ ಸ್ವತಂತ್ರನಾದ ಕಾರಣ, ಭಕ್ತಿದಾಸೋಹವಳವಟ್ಟಿತ್ತು. ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವಳವಟ್ಟಿತ್ತು. ಜಂಗಮ ಲಿಂಗವೆಂಬುದು ಸಂಗನಬಸವಣ್ಣಂಗೆ ಅಳವಟ್ಟಿತ್ತು. ದ್ವೈತನಲ್ಲ ಅದ್ವೈತನಲ್ಲ ಬಸವಣ್ಣ, ಭಾವಿಯಲ್ಲ ನಿರ್ಭಾವಿಯಲ್ಲ ಬಸವಣ್ಣ. ದೇಹಿಯಲ್ಲ ನಿರ್ದೇಹಿಯಲ್ಲ ಬಸವಣ್ಣ, ಖಂಡಿತನಲ್ಲ ಅಖಂಡಿತನಲ್ಲ ಬಸವಣ್ಣ. ಇಂತಪ್ಪ ಬಸವಣ್ಣಂಗೆ ಆವ ಗುಣಂಗಳೂ ಇಲ್ಲ. ನಿರ್ಗುಣ ನಿರಂಜನ ನಿಸ್ಸೀಮ ಶಿವನು ಬಸವಣ್ಣನೊಡನೆ ಆಡುತ್ತಿಪ್ಪನು ಹಾಡುತ್ತಿಪ್ಪನು. ಅದು ಕಾರಣ, ಬಸವಣ್ಣನ ಮನ ಪರುಷ, ಬಸವಣ್ಣನ ನೋಟ ಪರುಷ. ಭಾವ ಪರುಷ, ನಡೆ ಪುರುಷ, ನುಡಿ ಪರುಷ, ಹಸ್ತ ಪರುಷ. ತನುಮನಧನವ ನಿವೇದಿಸಿದಾತ ಬಸವಣ್ಣ. ಲಿಂಗ ಬಸವಣ್ಣ, ಜಂಗಮ ಬಸವಣ್ಣ, ಗುರು ಬಸವಣ್ಣ. ಆದಿ ಅನಾದಿಯಿಲ್ಲದಂದಿನ ಬಸವಣ್ಣನ ನೆನೆವುದೆ ಪರತತ್ವ. ಬಸವಣ್ಣನ ನೆನೆವುದೆ ಪರಮಜ್ಞಾನ, ಬಸವಣ್ಣನ ನೆನೆವುದೆ ಮಹಾನುಭಾವ. ಎಲೆ ಕಲಿದೇವ, ನಿಮ್ಮ ಶರಣ ಬಸವಣ್ಣನ ಸಮಸ್ತ ಗಣಂಗಳೆಲ್ಲಾ ನೆನೆದು ಶುದ್ಧರಾದರು.