Index   ವಚನ - 212    Search  
 
ನಿತ್ಯಲಿಂಗಾರ್ಚನೆಯ ಮಾಡದೆ ಒಡಲ ಹೊರೆವನೆ ಹೊಲೆಯ. ಹತ್ತು ನುಡಿದಡೇ[ನು] ಒಂದೂ ನಿಜವಿಲ್ಲದವನೆ ಹೊಲೆಯ. ಅರ್ಥದಾಸೆಗೆ ಪ್ರಾಣವ ಹತವ ಮಾಡುವನೆ ಹೊಲೆಯ. ಸತ್ಯ ಸದ್ಗುಣ ನಿತ್ಯಾಚಾರ ಧರ್ಮವಿಲ್ಲವೆಂಬವನೆ ಹೊಲೆಯ. ಭಕ್ತಿ ಮುಕ್ತಿಯ ಪಥವ ಹುಸಿಯೆಂಬವನೆ ಹೊಲೆಯ. ನಿತ್ಯ ಗುರುಲಿಂಗಜಂಗಮ ಪಾದತೀರ್ಥ ಪ್ರಸಾದವಿಲ್ಲವೆಂಬವನೆ ಹೊಲೆಯ. ಮತ್ತೆ ಪಶುಘಾತಕವ ಮಾಡುವನೆ ಹೊಲೆಯ. ಇಂತೀ ಏಳು ಹೊಲೆಯ ಹಿಂಗಿಸದೆ, ತನ್ನ ಕುಲದ ಹೆಮ್ಮೆಯ ಮೆರೆವ ಕುನ್ನಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ.