Index   ವಚನ - 217    Search  
 
ನಿರಾಳ ನಿರ್ಮಾಯ ಘನವಸ್ತುವೆ, ನಿಮ್ಮ ಬೆಳಗನುಗುಳಿದಡೆ ಪ್ರಸಾದವಾಯಿತ್ತಲ್ಲಾ. ನಿಮ್ಮುಗುಳಿನ ಕಿಂಚಿತ್ ಸಿಲುಕಿನಿಂದ, ಅಕ್ಷರಂಗಳು ಮೂರು ಹುಟ್ಟಿದವು. ನಿಮ್ಮುಗುಳಿನ ಸಿಲುಕಿನಿಂದ ನಾದಬಿಂದುಕಳೆಗಳಾದವು. ಅಯ್ಯಾ ನಿಮ್ಮುಗುಳಿನ ಸಿಲುಕಿನಿಂದ, ಇಬ್ಬರು ಹೆಣ್ಣು ಗಂಡು ಮಕ್ಕಳಾದರು. ಆ ಇಬ್ಬರು ಮಕ್ಕಳಿಂದೈವರು ಮಕ್ಕಳಾದರು. ನಿಮ್ಮುಗುಳ ಎಂಜಲೆಂದವರ ಕಣ್ಣು ಕಪ್ಪಾದವು. ಅಯ್ಯಾ ನಿಮ್ಮುಗುಳೆ ಘನಪ್ರಸಾದವೆಂದರಿದೆನು ಕಾಣಾ, ಕಲಿದೇವಯ್ಯ.