Index   ವಚನ - 221    Search  
 
ಪದ್ಮದೊಳಗಣ ಪತ್ರದೊಳಗಣ ದ್ವಿದಳದೊಳಗಣ ಸ್ವರದ ಬಯಕೆಯೊಳಗಣ ಕರ್ಣಿಕಾಕುಹರದೊಳಗಣ ಅಜಸ್ಥಲದೊಳಗಣ ಅಹಿಮಧ್ಯದೊಳಗಣ ಹಲವುಕೋಟಿ ಪತ್ರದೊಳಗಣ ಕುಹರ ಪದ್ಮಮಧ್ಯದೊಳಗಣ ಪ್ರಾಣವಿಪ್ಪುದೆಂದು ಆತ್ಮನೆ ನಿಶ್ಚೈಸುವೆನೆನುತ, ಅನಂತಯೋಗಿಗಳು ಸಂಸಾರದ ವರ್ಮವ ಕೆಡಿಸಿಹೆವೆಂದು, ಅನಂತನಾಳದಲ್ಲಿ ನಿರ್ಬಂಧವ ಮಾಡಿ ಅಮೃತರಾದೆಹೆವೆಂದು, ಅಮೃತವ ದಣಿಯಲುಂಡೆಹೆವೆಂದು, ನಾನಾ ಕುಟಿಲವಾದ ಭಾವದಲ್ಲಿ ಐದಾರೆ ಕಾಣೆವಯ್ಯ. ನಿಮ್ಮ ಶಿವಾಚಾರದ ಕುಳವನರಿಯದೆ, ಅನೇಕರು ಬಂಧನದಲ್ಲಿ ಸಿಲುಕಿದರು ಕಾಣಯ್ಯ. ನೀವು ಚತುರ್ವಿಧಸ್ಥಲ ಮಂಟಪವ ಮಾಡಿದ ಸಿಂಹಾಸನದ ಮೇಲಿರ್ದು ನಿತ್ಯರಿಗೆ ಭಕ್ತಿಯನೀವುದ ಕಂಡ ಭಕ್ತರು ನಿತ್ಯರು. ನಿಮಗೆ ಶರಣಾಗತಿವೊಕ್ಕೆ, ಮಹಾಪ್ರಸಾದ. ದೇವಾತ್ಮನು ಪರಿಭವಕ್ಕೆ ಬಪ್ಪನೆಯೆಂದಡೆ, ಅದು ಹುಸಿ ಕಾಣಿರೊ. ಆ ಆತ್ಮನಿಪ್ಪ ನೆಲೆಯ ಕೇಳಿರೊ. ಗುರುಭಕ್ತಿಯಲ್ಲಿಪ್ಪ, ದಾಸೋಹದಲ್ಲಿಪ್ಪ, ಅರ್ಪಿತ ಪ್ರಸಾದದಲ್ಲಿಪ್ಪ, ಮಾಡುವಲ್ಲಿಪ್ಪ, ಮಾಡಿಸಿಕೊಂಬಲ್ಲಿಪ್ಪ, ತನುಮನಧನವೊಂದಾಗಿ ನಿವೇದಿಸುವಲ್ಲಿಪ್ಪ, ಪರಿಪೂರ್ಣಾತ್ಮವೆಂದು ನಿತ್ಯರಿಗೆ ನೀವು ಕಾರುಣ್ಯವ ಮಾಡಿದಿರಿ. ನಿಮ್ಮ ಕರುಣಕಟಾಕ್ಷದಲ್ಲಿ ಬಸವಣ್ಣನಲ್ಲದೆ ಮಾಡುವರಿಲ್ಲ, ಮಾಡಿಸಿಕೊಂಬವರಿಲ್ಲ. ಅದು ಕಾರಣ, ನಿಮ್ಮ ಬಸವಣ್ಣ ಹೇಳಿತ್ತ ಮೀರೆ ಕಾಣಾ, ಕಲಿದೇವಯ್ಯ.