Index   ವಚನ - 245    Search  
 
ಬಸವ ಮೊದಲಾದ ಮಹಾಪ್ರಮಥಣಂಗಳ ಸಮೂಹಕ್ಕೆ ಕಾರಣರಾದ, ಮರ್ತ್ಯಲೋಕದ ಮಹಾಗಣಂಗಳ ಅಂಶೋದ್ಧಾರಕರಾದ, ಲಿಂಗಾಚಾರ ಭಕ್ತಮಾಹೇಶ್ವರರ ಪಾಣಿಗ್ರಹಣ ಕ್ರಿಯಾಶಕ್ತಿಯರು ಸದಾವಾಸ ಪರಿಯಂತರ ಇಷ್ಟಮಹಾಲಿಂಗವ ತಮ್ಮ ಅಂಗವ ಬಿಟ್ಟು ಅಗಲಿಸಲಾಗದು. ನಿರಂತರ ಶ್ರೀಗುರುಲಿಂಗಜಂಗಮದ ಚರಣೋದ್ಧೂಳನವನ್ನು ಲಲಾಟದಲ್ಲಿ ತ್ರಿಪುಂಡ್ರ ರೇಖೆಗಳ ಧರಿಸಿ, ಮಂತ್ರಸ್ಮರಣೆಯಿಂದ ಲಿಂಗಜಂಗಮಕ್ಕೆ ಪಾಕವ ಮಾಡಿ ಸಮರ್ಪಿಸಿ, ಕುಶಬ್ದವನಳಿದು ಆಚರಿಸುವದೆ ಸತ್ಯಸದಾಚಾರ. ಈ ಸನ್ಮಾರ್ಗವ ಬಿಟ್ಟು, ಭವಿಪ್ರಾಣಿಗಳಂತೆ ಸರ್ವಾಂಗಕ್ಕೆ ಹಚ್ಚೆಯನೂರಿಸಿಕೊಂಡು, ಲಲಾಟದಲ್ಲಿ ಕುಂಕುಮಗಂಧದ ಬೊಟ್ಟು, ಏಕಾಂತವಾಸದಲ್ಲಿ ಹಲವು ಪ್ರಸಂಗ. ಭವಿಜನ್ಮಾತ್ಮರು ತೊಳೆದು ಹೊದಿಕೆ, ಅವರ ಸಂಸರ್ಗ ಮೊದಲಾದ ದುಃಕೃತ್ಯವ ಮಾಡಿದಲ್ಲಿ ಕಂಡು ಸುಮ್ಮನಿರಲಾಗದು. ಭಕ್ತಮಾಹೇಶ್ವರರು ಆ ಸ್ತ್ರೀಯರಿಗೆ ಪ್ರತಿಜ್ಞೆಯ ಮಾಡುವದು. ಅದ ಮೀರಿದಡೆ ಅವರಿಂದ ಪಾಕವ ಕೊಳ್ಳಲಾಗದು. ಈ ಮಾರ್ಗವನಾಚರಿಸದಿರ್ದಂಥ ಭಕ್ತನಲ್ಲಿ, ಗುರುಚರಮೂರ್ತಿಗಳು, ಅವನ ಮನೆಯ ಹೊಕ್ಕು, ಲಿಂಗಾರ್ಚನೆ ಲಿಂಗಾರ್ಪಣವ ಮಾಡಲಾಗದು. ಗುರುವಾಕ್ಯವ ಮೀರಿ, ಅರ್ಥದಿಚ್ಫೆಗೆ ಹೊಕ್ಕು ಬೆರಸಿದಡೆ, ಅನಾದಿ ಗುರುಲಿಂಗಜಂಗಮ ಭಕ್ತಪ್ರಸಾದಕ್ಕೆ ಹೊರಗಾಗಿ, ಅಂತ್ಯದಲ್ಲಿ ಶತಸಹಸ್ರ ವೇಳೆ ಶುನಿಸೂಕರಾದಿಗಳಲ್ಲಿ ಬಪ್ಪುದು ತಪ್ಪದು ನೋಡಾ, ಕಲಿದೇವರದೇವ.