Index   ವಚನ - 337    Search  
 
ಹುಟ್ಟದ ಬೀಜವಿರ್ದಡೇನಯ್ಯಾ ಧರೆಯೊಳಗೆ? ಅಟ್ಟುಣ್ಣಬಾರದ ಮಡಕೆ ಇರ್ದಡೇನಯ್ಯಾ ಮನೆಯೊಳಗೆ? ಶಿವ ನಿಮ್ಮ ಮುಟ್ಟದ ಮನವಿರ್ದಡೇನಯ್ಯಾ ತನುನಿನೊಳಗೆ? ಕೆಚ್ಚಲ ಕಚ್ಚಿದ ಉಣ್ಣೆ ಬಲ್ಲುದೆ ಕ್ಷೀರದ ರುಚಿಯ? ಬಚ್ಚಲೊಳಗಣ ಬಾಲ್ಪುಳು ಬಲ್ಲುದೆ ನಿಚ್ಚಳದ ನೀರಸುಖವ? ನಿಚ್ಚನಿಚ್ಚಲೋದುವ ಗಿಳಿ ಬಲ್ಲುದೆ ತನಗೆ ಬಹ ಬೆಕ್ಕಿನ ಬಾಧೆಯ? ಹುಚ್ಚುಕೊಂಡ ನಾಯಿ ಬಲ್ಲುದೆ ತನ್ನ ಸಾಕಿದೊಡೆಯನ? ಇದು ಕಾರಣ, ಒಡಲ ಪಡೆದಡೇನು? ಮಡದಿಯ ನೆರಹಿದಡೇನು? ಒಡವೆಯ ಗಳಿಸಿದಡೇನು? ಶಿವನೆ ನಿಮ್ಮನರಿಯದ ಮನುಜನ ಒಡಲೆಂಬುದು, ಹೊಲೆಜೋಗಿಯ ಕೈಯ ಒಡೆದ ಸೋರೆಯಂತೆ ಕಾಣಾ, ಕಲಿದೇವಯ್ಯ.